ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ನಸುಕಿನ 3 ಗಂಟೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 17 ಮಂದಿ ಪ್ರಯಾಣಿಕರು ಸಜೀವ ದಹನವಾಗಿದ್ದಾರೆ.
ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಕೋಚ್ ಬಸ್‌ಗೆ, ಎದುರಿನಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡರ್ ಹಾರಿ ಬಂದು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ತಕ್ಷಣ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ನಲ್ಲಿದ್ದವರ ಪೈಕಿ ಹೆಚ್ಚಿನವರು ಗೋಕರ್ಣದವರಾಗಿದ್ದು, ಹೀಗಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಅಲ್ಲಿನವರೇ ಇರಬಹುದು ಎಂದು ಶಂಕಿಸಲಾಗಿದೆ. ಮೃತರ ಗುರುತು ಈವರೆಗೂ ಪತ್ತೆಯಾಗಿಲ್ಲ.
ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಟಿದ್ದ ಖಾಸಗಿ ಸೀಬರ್ಡ್ ಸ್ಲೀಪರ್ ಬಸ್, ಶಿವಮೊಗ್ಗ ಮತ್ತು ಹೊನ್ನಾವರ ಮಾರ್ಗವಾಗಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ತೆರಳುತ್ತಿತ್ತು. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಆಸನಗಳು ಕಾಯ್ದಿರಿಸಲಾಗಿದ್ದು, 25 ಪ್ರಯಾಣಿಕರು ಗೋಕರ್ಣಕ್ಕೆ, ಇಬ್ಬರು ಕುಮಟಾಕ್ಕೆ ಮತ್ತು ಇಬ್ಬರು ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದರು.
ಚಿತ್ರದುರ್ಗದ ಭೀಕರ ಅಪಘಾತದಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ಗೋಕರ್ಣದವರೇ!

