Wednesday, December 10, 2025

ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿದ ತಾಯಿ : ಮುಗಿಲು ಮುಟ್ಟಿದ ಆಕ್ರಂದನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ಮಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪದಾರ್ ಪಂಚಾಯತ್‌ನ ದಿಬ್ಡಿ ಗ್ರಾಮದಲ್ಲಿ ನಡೆದಿದೆ.

ಜಮ್ನಾ ದೇವಿ (25) ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ತಾಯಿ. ಅನುಮಾನದ ಹಿನ್ನೆಲೆ ಹುಡುಕುತ್ತಿದ್ದಾಗ ಮೂವರ ಮೃತದೇಹಗಳು ಬಾವಿಯಲ್ಲಿ ಪತ್ತೆಯಾಗಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂದರ್ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಆಚಾರ್ಯ ಪರಿಶೀಲನೆ ನಡೆಸಿದರು. ಸ್ಥಳೀಯರ ಸಹಕಾರದೊಂದಿಗೆ ಬಾವಿಯಿಂದ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಘಟನೆ ಕುರಿತು ಮಾಹಿತಿ ನೀಡಿರುವ ಮಂದರ್ ಪೊಲೀಸ್ ಠಾಣಾಧಿಕಾರಿ ಪ್ರವೀಣ್ ಆಚಾರ್ಯ, ಕೇವರಂ ರೆಬಾರಿ ಅವರ ಪತ್ನಿ ಜಮ್ನಾ ದೇವಿ ಎನ್ನುವವರು ಕಳೆದ ಹಲವು ದಿನಗಳ ಹಿಂದೆಯಷ್ಟೇ ಗಂಡನ ಮನೆಯಿಂದ ವಿಬಾರಿ ಗ್ರಾಮದಲ್ಲಿರುವ ತವರು ಮನೆಗೆ ಮರಳಿದ್ದರು. ಕೆಲವು ದಿನಗಳ ಹಿಂದೆಯಷ್ಟೇ, ಜಮ್ನಾ ದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅವರಿಗೆ ಎರಡೂವರೆ ವರ್ಷದ ಮಗಳು ಕೂಡ ಇದ್ದಳು. ಘಟನೆಗೂ ಮುನ್ನ ಜಮ್ನಾ ದೇವಿ ತನ್ನ ನವಜಾತ ಶಿಶುವನ್ನು ಸೊಂಟಕ್ಕೆ ಕಟ್ಟಿಕೊಂಡು ಹೊತ್ತೊಯ್ಯುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ಆದರೆ, ಘಟನೆಯ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

error: Content is protected !!