ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿಯೊಬ್ಬಳ ತನ್ನ ಪ್ರೇಯಸಿಗಾಗಿ ಐದು ತಿಂಗಳ ಕೂಸನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಐದು ತಿಂಗಳ ಮಗುವನ್ನು ಕೊಂದ ಆರೋಪದ ಮೇಲೆ ಸಲಿಂಗ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, 25 ವರ್ಷದ ಯುವತಿಯು ತನ್ನ ಸಲಿಂಗಿ ಜೊತೆಗಾತಿಯೊಂದಿಗೆ ಸೇರಿಕೊಂಡು ಮಗುವನ್ನು ಹತ್ಯೆ ಮಾಡುವ ಮೂಲಕ ನೀಚ ಕೃತ್ಯ ಎಸಗಿದ್ದಾಳೆ.
ನವೆಂಬರ್ 2ರಂದು, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಳಮಂಗಲಂನಲ್ಲಿ ಈ ಘಟನೆ ನಡೆದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. ಕೆಳಮಂಗಲ ಸಮೀಪದ ಚಿನ್ನತ್ತಿ ಗ್ರಾಮದ ಎಸ್. ಭಾರತಿ ಹಾಗೂ ಆಕೆಯ ಸಲಿಂಗಿ ಜೊತೆಗಾತಿ, ಅದೇ ಗ್ರಾಮದ 22 ವರ್ಷದ ಸುಮಿತ್ರಾ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಭಾರತಿಯು ಸುರೇಶ್ ಎಂಬಾತನನ್ನು ಮದುವೆಯಾಗಿದ್ದು, ಇವರಿಗೆ ಮೂವರು ಮಕ್ಕಳಿದ್ದರು. ಐದು ಮತ್ತು ಮೂರು ವರ್ಷದ ಹೆಣ್ಣು ಮಕ್ಕಳು ಹಾಗೂ ಮೃತಪಟ್ಟ ಮಗು 5 ತಿಂಗಳ ಗಂಡು ಮಗು ಧ್ರುವನ್ ಎಂದು ಪೊಲೀಸರು ವಿವರಿಸಿದ್ದಾರೆ. ಪತಿಗೆ ಪತ್ನಿಯ ಗರ್ಲ್‌ಫ್ರೆಂಡ್ ವಿಚಾರ ತಿಳಿದು ಇಬ್ಬರ ನಡುವೆ ಜಗಳವಾಗಿದೆ. ಜಗಳದ ನಂತರ ಭಾರತಿ ತವರು ಮನೆ ಸೇರಿದ್ದಳು. ಮನೆಯವರೆಲ್ಲ ರಾಜಿ ಮಾಡಿಸಿ ಮತ್ತೆ ಗಂಡನ ಮನೆ ಸೇರಿಸಿದ್ದಾರೆ.
ಗರ್ಲ್‌ಫ್ರೆಂಡ್ ಕುಮ್ಮಕ್ಕಿನ ಮೇಲೆ ಮಗುವಿನ ಕತ್ತು ಹಿಸುಕಿ ಭಾರತಿ ಕೊಂದಿದ್ದಾಳೆ ಎನ್ನಲಾಗಿದೆ. ಉಸಿರುಗಟ್ಟಿ ಮಗು ಸತ್ತಿದೆ ಎಂದು ಪತಿಯನ್ನು ನಂಬಿಸಿದ್ದಾಳೆ. ಇದನ್ನು ನಂಬಿದ ಪತಿ ಕಣ್ಣೀರಿಡುತ್ತಲೇ ಎಲ್ಲ ಕಾರ್ಯ ಮುಗಿಸಿದ್ದಾರೆ. ತದನಂತರ ಇದ್ಯಾಕೋ ಸರಿ ಹೋಗುತ್ತಿಲ್ಲ ಎಂದು ಸುರೇಶ್ ಪೊಲೀಸರ ಮೊರೆ ಹೋಗಿದ್ದಾರೆ. ಆಗ ಸತ್ಯ ಹೊರಬಿದ್ದಿದೆ.
ಕೂಡಲೇ ಕ್ರಮ ಕೈಗೊಂಡ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. ಅವರಿಬ್ಬರ ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಭಾರತಿ ಹಾಗೂ ಸುಮಿತ್ರಾಳು ಮಗುವನ್ನು ಕೊಲ್ಲುವ ಬಗ್ಗೆ ಮಾಡಿರುವ ಮೆಸೇಜ್ ಹಾಗೂ ಮಗು ಮೃತಪಟ್ಟ ನಂತರ ಅದರ ದೇಹದ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಆರೋಪಿಗಳಾದ ಭಾರತಿ ಹಾಗೂ ಸುಮಿತ್ರಾಳ ಫೋಟೋ ಹಾಗೂ ವಿಡಿಯೊಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರಾಗಿರುವ ಆರೋಪಿಗಳನ್ನು ಕೋರ್ಟ್‌ಗೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಯಿತು.
ಗರ್ಲ್‌ಫ್ರೆಂಡ್ ಮೇಲಿನ ಪ್ರೀತಿಗಾಗಿ ಕರುಳ ಬಳ್ಳಿಯನ್ನೇ ಕೊಂದ ತಾಯಿ!

