ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸುತ್ತಮುತ್ತಲು ತಾಯಿ ಹುಲಿ ಜೊತೆ ನಾಲ್ಕು ಮರಿಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಇದೀಗ ತಾಯಿ ಹುಲಿಯನ್ನು ಸೆರೆಹಿಡಿಯಲಾಗಿದೆ.
ನಂಜೇದೇವನಪುರದಲ್ಲಿ ಆಪರೇಷನ್ 5 ಟೈಗರ್ಸ್ನ ಮೊದಲ ಹಂತ ಯಶ ಕಂಡಿದ್ದು, ತುಮಕೂರು ಮಾದರಿ ಬೋನ್ ಅಳವಡಿಸಿ ಹಸುವನ್ನು ಕಟ್ಟಲಾಗಿತ್ತು. ಹಸು ಬೇಟೆಗೆ ಬಂದ ತಾಯಿ ಹುಲಿ ಬೋನಿನಲ್ಲಿ ಸೆರೆಯಾಗಿದೆ. ಸೆರೆಯಾದ ತಾಯಿ ಹುಲಿಗೆ ಅಂದಾಜು 8 ವರ್ಷಗಳಾಗಿದೆ.
ರೈತ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ ಅಳವಡಿಸಿದ್ದ ಕ್ಯಾಮರಾದಲ್ಲಿ ಹುಲಿ ಸಂಚಾರ ದೃಶ್ಯ ಸೆರೆಯಾಗಿತ್ತು. ಬಳಿಕ, ಬಾಳೆ ತೋಟವೊಂದರಲ್ಲಿ ಅಳವಡಿಸಿದ್ದ ತುಮಕೂರು ಮಾದರಿ ಬೋನಿನಲ್ಲಿ ತಾಯಿ ಹುಲಿ ಸೆರೆಯಾಗುವ ಮೂಲಕ ಆಪರೇಷನ್ 5 ಟೈಗರ್ಸ್ ಮೊದಲ ಹಂತದಲ್ಲಿ ಯಶ ಕಂಡಿದೆ.
5 ಹುಲಿಗಳ ಪೈಕಿ ತಾಯಿ ಹುಲಿ ಸೆರೆಯಾಗಿದ್ದು, ಮಿಕ್ಕ 4 ಮರಿ ಹುಲಿಗಳ ಸೆರೆಗೆ ಕಾರ್ಯಾಚರಣೆ ಆರಂಭವಾಗಿದೆ.
ಸೆರೆ ಸಿಕ್ಕ ತಾಯಿ ಹುಲಿಗೆ ಪಶು ವೈದ್ಯರಿಂದ ಅರವಳಿಕೆ ಮದ್ದು ನೀಡಿ ಅದರ ಆರೋಗ್ಯದ ಸ್ಥಿತಿಗತಿ ಪರಿಶೀಲನೆ ಮಾಡಲಾಗಿದೆ. ತುಮಕೂರು ಮಾದರಿ ಕೇಜ್ನಿಂದ ನಾರ್ಮಲ್ ಕೇಜ್ಗೆ ಹುಲಿಯನ್ನು ಸ್ಥಳಾಂತರಿಸಲಾಗಿದೆ. ಇನ್ನು ಅದೇ ಬೋನಿನಲ್ಲಿ ಹುಲಿಯನ್ನು ಇರಿಸಿ ಉಳಿದ ನಾಲ್ಕು ಮರಿ ಹುಲಿಗಳಿಗಾಗಿ ಬಿಆರ್ಟಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಲಿದ್ದಾರೆ.
ಈಗಾಗಲೇ ಥರ್ಮಲ್ ಡ್ರೋನ್ ಕ್ಯಾಮರಾ ತರಿಸಿಕೊಂಡಿರುವ ಅರಣ್ಯ ಸಿಬ್ಬಂದಿ ರಾತ್ರಿಯಿಡೀ ನಾಲ್ಕು ಮರಿ ಹುಲಿಗಳಿಗಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ನಂಜೇದೇವನಪುರ, ವೀರನಪುರ ಸುತ್ತಮುತ್ತಿನ ಗ್ರಾಮಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿ ಚಾಮರಾಜನಗರ ತಹಶೀಲ್ದಾರ್ ಗಿರಿಜಾ ಆದೇಶಿಸಿದ್ದರು.
ಕಳೆದೊಂದು ತಿಂಗಳಿನಿಂದ ಬಿಟ್ಟು ಬಿಡದೆ ಮೂರ್ನಾಲ್ಕು ಗ್ರಾಮಸ್ಥರ ನಿದ್ದೆಗೆಡಿಸಿದ್ದ 5 ಹುಲಿಗಳ ಪೈಕಿ ತಾಯಿ ಹುಲಿ ಅರಣ್ಯ ಸಿಬ್ಬಂದಿ ಇರಿಸಿದ್ದ ಕೇಜ್ನಲ್ಲಿ ಲಾಕ್ ಆಗಿದ್ದು, ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಈಗ ಸೆರೆ ಸಿಕ್ಕಿದ್ದು ಕೇವಲ ತಾಯಿ ಹುಲಿ ಮಾತ್ರ ಇನ್ನು, 4 ಮರಿ ಹುಲಿಗಳ ಸೆರೆಗಾಗಿ ಆಪರೇಷನ್ ಚಾಲ್ತಿಯಲ್ಲಿದೆ. ಆದಷ್ಟು ಶೀಘ್ರ ಮರಿಗಳನ್ನೂ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

