ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಯಿ ಮತ್ತು ಮೂರು ವರ್ಷದ ಹಸುಗೂಸಿನ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿರುವ ಕರುಣಾಜನಕ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲ ಗ್ರಾಮದಲ್ಲಿ ನಡೆದಿದೆ.
ಕೊಡಿಯಾಲ ಗ್ರಾಮದ ಆರ್ವಾರ ನಿವಾಸಿ ಹರೀಶ್ ಎಂಬವರ ಪತ್ನಿ ಮಧುಶ್ರೀ (34) ಮತ್ತು ಅವರ ಪುತ್ರ ಧನ್ವಿ (3) ಮೃತಪಟ್ಟವರು. ನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಒಳಮೊಗ್ರು ಗ್ರಾಮದ ಮಧುಶ್ರೀ ಅವರು ಹರೀಶ್ ಅವರನ್ನು ವಿವಾಹವಾಗಿದ್ದರು. ಭಾನುವಾರ ರಾತ್ರಿ ಎಂದಿನಂತೆ ಮನೆ ಕೆಲಸ ಮುಗಿಸಿ ಮಲಗಿದ್ದ ಮಧುಶ್ರೀ, ಬೆಳಿಗ್ಗೆ ಮಗುವಿನೊಂದಿಗೆ ನಾಪತ್ತೆಯಾಗಿದ್ದರು. ಗಾಬರಿಗೊಂಡ ಕುಟುಂಬಸ್ಥರು ಸುತ್ತಮುತ್ತ ಹುಡುಕಾಟ ನಡೆಸಿದಾಗ, ಮನೆ ಸಮೀಪದ ಕೆರೆಯಲ್ಲಿ ಇಬ್ಬರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ.
ಮಧುಶ್ರೀ ಅವರು ಮಗುವಿನೊಂದಿಗೆ ಕೆರೆಗೆ ಹಾರುವ ಮುನ್ನ, ಮಗು ಬೇರ್ಪಡಬಾರದೆಂಬ ಕಾರಣಕ್ಕೆ ಬಟ್ಟೆಯಿಂದ ಮಗುವನ್ನು ತನ್ನ ಸೊಂಟಕ್ಕೆ ಬಿಗಿದು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಕೆರೆಯಿಂದ ಮೃತದೇಹಗಳನ್ನು ಹೊರತೆಗೆದಾಗ ಮಗು ತಾಯಿಯನ್ನು ಅಪ್ಪಿಕೊಂಡ ಸ್ಥಿತಿಯಲ್ಲೇ ಪತ್ತೆಯಾಗಿರುವುದು ಸ್ಥಳೀಯರ ಕಣ್ಣಾಲಿಗಳನ್ನು ತೇವಗೊಳಿಸಿದೆ.
ಮಧುಶ್ರೀ ಸಾವಿನ ಬಗ್ಗೆ ಅವರ ತಾಯಿ ರತ್ನಾವತಿ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಕೇವಲ ಆತ್ಮಹತ್ಯೆಯಲ್ಲ, ಮಗಳ ಸಾವಿನ ಹಿಂದೆ ಸಂಚು ಇರಬಹುದು ಎಂದು ಅವರು ಬೆಳ್ಳಾರೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಆತ್ಮಹತ್ಯೆ ಮತ್ತು ಕೊಲೆ ಎರಡೂ ಆಯಾಮಗಳಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.

