Wednesday, January 14, 2026
Wednesday, January 14, 2026
spot_img

ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ್ದಕ್ಕೆ ಮಗುವನ್ನೇ ಕೊಂದ ತಾಯಿಯ ಪ್ರಿಯಕರ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

3 ವರ್ಷದ ಬಾಲಕನೊಬ್ಬ ಮಲಗಿದ್ದಾಗ ಆಕಸ್ಮಿಕವಾಗಿ ಆತನ ತಾಯಿಯ ಪ್ರಿಯಕರನ ಬಟ್ಟೆಯ ಮೇಲೆ ಮಲವಿಸರ್ಜನೆ ಮಾಡಿದ್ದು, ಇದರಿಂದ ಕೋಪಗೊಂಡ ಆತ ಆ ಮಗುವನ್ನು ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವರದಿಯಾಗಿದೆ.

ಡಿಸೆಂಬರ್ 11ರ ರಾತ್ರಿ ಮಲಗಲು ಹೋದಾಗ ಕುಡಿದಿದ್ದ ಮೌಲಾಲಿ ಅಲಿಯಾಸ್ ಅಕ್ಬರ್ ರಜಾಕ್ ಬಾಲಕ ಫರ್ಹಾನ್​ನ ಕತ್ತು ಹಿಸುಕಿ ಕೊಂದಿದ್ದಾನೆ.

ರಾತ್ರಿ ಫರ್ಹಾನ್ ಎಂಬ ಆ ಮಗುವಿನ ಪಕ್ಕದಲ್ಲಿ 44 ವರ್ಷದ ಮೌಲಾಲಿ ಮಲಗಿದ್ದ. ಆ ಮಗುವಿನ ತಾಯಿ ಕೆಲಸಕ್ಕೆ ಬೇರೆ ಮನೆಗೆ ಹೋಗಿದ್ದವಳು ಇನ್ನೂ ಬಂದಿರಲಿಲ್ಲ. ಈ ವೇಳೆ ಆ ಮಗು ಮಲವಿಸರ್ಜನೆ ಮಾಡಿದೆ. ಕುಡಿತದ ಅಮಲಿನಲ್ಲಿ ಮಲಗಿದ್ದ ಆತನಿಗೆ ತನ್ನ ಮೈ ಗಲೀಜಾಗಿದ್ದಕ್ಕೆ ಕೋಪ ಬಂದಿದೆ. ಬಳಿಕ ಮಗುವಿಗೆ ಹೊಡೆದು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ತಾಯಿ 28 ವರ್ಷದ ಶಹನಾಜ್ ಶೇಖ್ ಮನೆಗೆ ಮರಳಿದಾಗ ಫರ್ಹಾನ್ ಮೇಲಿಂದ ಬಿದ್ದಿದ್ದಾನೆಂದು ಆತ ಅವಳಿಗೆ ಹೇಳಿದ್ದ. ಅವಳು ಕೂಡ ಆ ಮಾತನ್ನು ನಂಬಿದ್ದಳು. ನಂತರ ಆ ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಅವನನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲು ಸೂಚಿಸಿದಾಗ ಆ ತಾಯಿ ತನ್ನ ಮಗುವನ್ನು ಕರ್ನಾಟಕದ ವಿಜಯಪುರಕ್ಕೆ ಕರೆದೊಯ್ದಳು. ಅಲ್ಲಿ ಬಸ್​ ನಿಲ್ದಾಣದಿಂದ ಆಕೆಯ ಪ್ರಿಯಕರ ಪರಾರಿಯಾಗಿದ್ದ.

ಕೊನೆಗೆ ಶಹನಾಜ್ ತನ್ನ ಮೊದಲ ಪತಿಯ ಸಹಾಯದಿಂದ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಳು. ಆದರೆ, ಆಸ್ಪತ್ರೆಗೆ ಬರುವಷ್ಟರಲ್ಲಿ ಮಗು ಮೃತಪಟ್ಟಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಕತ್ತು ಹಿಸುಕಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ದೃಢಪಡಿಸಲಾಯಿತು. ಬಳಿಕ ಆ ತಾಯಿಯೇ ತನ್ನ ಪ್ರಿಯಕರನ ವಿರುದ್ಧ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಮೊದಲ ಮದುವೆಯಿಂದ ಇಬ್ಬರು ಮಕ್ಕಳಿರುವ ಶಹನಾಜ್ ಮತ್ತು ಆಕೆಯ ಪ್ರಿಯಕರ ಮೌಲಾಲಿ ಇಬ್ಬರೂ ವಿಜಯಪುರದವರಾಗಿದ್ದರೂ, ಕಳೆದ ಒಂದು ತಿಂಗಳಿನಿಂದ ಸೊಲ್ಲಾಪುರದಲ್ಲಿ ವಾಸಿಸುತ್ತಿದ್ದರು. ಈಗ ಮೌಲಾಲಿ ತಾನೇ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡು, ಜೈಲಿನಲ್ಲಿದ್ದಾನೆ.

Most Read

error: Content is protected !!