ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದಲ್ಲಿ ಮದುವೆಗೆ ಕೆಲವೇ ಗಂಟೆಗಳ ಮೊದಲು ಅಕ್ಕ-ತಂಗಿಯರಿಬ್ಬರು ಸಾವಿಗೆ ಶರಣಾಗಿದ್ದಾರೆ.
ಮೃತರನ್ನು ಮನೈ ಗ್ರಾಮದ ಶೋಭಾ (25) ಮತ್ತು ವಿಮಲಾ (23) ಎಂದು ಗುರುತಿಸಲಾಗಿದೆ.ಜೋಧಾಪುರದ ಈ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಮದುವೆಯ ಸಂಭ್ರಮದಲ್ಲಿದ್ದ ಮನೆ ಈಗ ಶೋಕ ಸಾಗರದಲ್ಲಿ ಮುಳುಗಿದೆ.
ಫೆಬ್ರವರಿ 21ರಂದು ಸಹೋದರಿಯರ ಮದುವೆ ನಿಗದಿಪಡಿಸಲಾಗಿತ್ತು. ಫೆಬ್ರವರಿ 20ರ ಮಧ್ಯರಾತ್ರಿ ತನಕ ಮನೆಯಲ್ಲಿ ಮದುವೆ ಪೂರ್ವ ಶಾಸ್ತ್ರ ನೆರವೇರಿತ್ತು. ಇನ್ನು ಇಬ್ಬರು ಮದುಮಕ್ಕಳು ನಿದ್ದೆಗೆಂದು ರೂಮ್‌ಗೆ ತೆರಳಿ ಸಾವಿಗೆ ಶರಣಾಗಿದ್ದರು. ಮನೆಯವರು ಬೆಳಗ್ಗೆ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ಗಂಡ ಮೃತಪಟ್ಟ ಒಂದೇ ವಾರಕ್ಕೆ ಪೊಲೀಸಪ್ಪನಿಂದ ಕಿರುಕುಳ; ಮನನೊಂದು ಮಹಿಳೆ ಆತ್ಮಹತ್ಯೆ
ಎಡಿಸಿಪಿ ರೋಷನ್ ಮೀನಾ ಮಾಹಿತಿ ನೀಡುತ್ತಾ, ʼಮುಂಜಾನೆ 4 ಗಂಟೆ ಸುಮಾರಿಗೆ ಶೋಭಾ ಮತ್ತು ವಿಮಲಾ ಅವರ ಆರೋಗ್ಯ ಹದಗೆಡಲು ಆರಂಭವಾಯ್ತು. ಇದರಿಂದ ಮನೆಯವರು ಗಾಬರಿಯಾಗಿ ಅವರನ್ನು ಜೋಧಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು. ಹೀಗಾಗಿ ಮೃತದೇಹವನ್ನು ಮನೆಗೆ ತರಲಾಯಿತು. ಇದೀಗ ಸಹೋದರಿಯರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆʼ ಎಂದು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಸಹೋದರಿಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಾಗ್ಯೂ ಸಾವಿಗೆ ನಿಜವಾದ ಕಾರಣ ಪೋಸ್ಟ್ ಮಾರ್ಟಂ ವರದಿ ಕೈ ಸೇರಿದ ಬಳಿಕವಷ್ಟೇ ಗೊತ್ತಾಗಲಿದೆ. ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿಲ್ಲ. ಹೀಗಾಗಿ ನೈಜ ಕಾರಣ ತಕ್ಷಣಕ್ಕೆ ತಿಳಿದು ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.



