ಹೊಸದಿಗಂತ ಹಾಸನ:
ಜಿಲ್ಲೆಯಲ್ಲಿ ಮುಂದುವರಿದಿರುವ ಕಾಡಾನೆಗಳ ಅಟ್ಟಹಾಸಕ್ಕೆ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ರಾಜಮ್ಮ ಅವರ ಪುತ್ರಿ ಶೋಭಾ ಅವರು ಬಲಿಯಾಗಿದ್ದಾರೆ. ಈ ದುರ್ಘಟನೆಯಿಂದ ಆಘಾತಕ್ಕೊಳಗಾಗಿರುವ ಮೃತರ ಕುಟುಂಬಕ್ಕೆ ಹಾಸನ ಸಂಸದರಾದ ಶ್ರೇಯಸ್ ಪಟೇಲ್ ಅವರು ಇಂದು ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಹಾಸನ ತಾಲ್ಲೂಕಿನ ಕಟ್ಟಾಯ ಹೋಬಳಿಯ ಸತ್ತಿಗರಹಳ್ಳಿ ಗ್ರಾಮದಲ್ಲಿ ಇರಿಸಲಾಗಿದ್ದ ಶೋಭಾ ಅವರ ಪಾರ್ಥಿವ ಶರೀರದ ದರ್ಶನ ಪಡೆದ ಸಂಸದರು, ಪುಷ್ಪಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತರ ಪತಿ ನಾಗರಾಜ್ ಮತ್ತು ತಾಯಿ ರಾಜಮ್ಮ ಅವರೊಂದಿಗೆ ಮಾತನಾಡಿ ಧೈರ್ಯ ತುಂಬಿದ ಶ್ರೇಯಸ್ ಪಟೇಲ್ ಅವರು, ವೈಯಕ್ತಿಕವಾಗಿ 50,000 ರೂಪಾಯಿಗಳ ಆರ್ಥಿಕ ಸಹಾಯ ಹಸ್ತ ಚಾಚಿದರು.
ಅರಣ್ಯ ಇಲಾಖೆಯಿಂದ ಸಿಗಬೇಕಾದ ಗರಿಷ್ಠ ಮೊತ್ತದ ಸರ್ಕಾರಿ ಪರಿಹಾರವನ್ನು ಆದಷ್ಟು ಬೇಗ ಕೊಡಿಸುವುದಾಗಿ ಸಂಸದರು ಭರವಸೆ ನೀಡಿದರು.
ತಾಲ್ಲೂಕಿನಲ್ಲಿ ತೀವ್ರವಾಗಿರುವ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕವಾಗಿ ಧ್ವನಿ ಎತ್ತುವುದಾಗಿ ಗ್ರಾಮಸ್ಥರಿಗೆ ಮಾತು ನೀಡಿದರು.
ಕುಟುಂಬಕ್ಕೆ ಎದುರಾಗಿರುವ ಈ ಅತೀವ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.



