April 13, 2026
Monday, April 13, 2026
spot_img

ಸಂಸದರ ‘Tweet’ ವರ್ಸಸ್ ಬಿಎಂಆರ್‌ಸಿಎಲ್‌ ‘Wait’: ನಾಳೆ ಮೆಟ್ರೋ ದರ ಏರುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ಲೈಫ್‌ಲೈನ್ ‘ನಮ್ಮ ಮೆಟ್ರೋ’ ಪ್ರಯಾಣ ದರ ನಾಳೆಯಿಂದ ಏರಿಕೆಯಾಗಲಿದೆಯೇ ಅಥವಾ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆಯೇ ಎನ್ನುವ ಪ್ರಶ್ನೆಗೆ ಬಿಎಂಆರ್‌ಸಿಎಲ್ ಕಡೆಯಿಂದ ಇನ್ನೂ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.

ಶನಿವಾರವಷ್ಟೇ ಸಂಸದ ತೇಜಸ್ವಿ ಸೂರ್ಯ ಅವರು, “ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಅವರು ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಆದ್ದರಿಂದ ಸೋಮವಾರದಿಂದ ದರ ಏರಿಕೆ ಇರುವುದಿಲ್ಲ” ಎಂದು ತಿಳಿಸಿದ್ದರು. ಆದರೆ, ಈ ಕುರಿತು ಬಿಎಂಆರ್‌ಸಿಎಲ್‌ಗೆ ಯಾವುದೇ ಅಧಿಕೃತ ಲಿಖಿತ ಆದೇಶ ಈವರೆಗೆ ತಲುಪಿಲ್ಲ. “ನಮಗೆ ಪತ್ರ ಬರುವವರೆಗೂ ಹಳೆ ನಿರ್ಧಾರದಂತೆ ದರ ಏರಿಕೆಯಾಗುವ ಸಾಧ್ಯತೆಯಿದೆ” ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ದರ ಏರಿಕೆಯ ಲೆಕ್ಕಾಚಾರ ಹೀಗಿದೆ:

ದರ ನಿಗದಿ ಸಮಿತಿ ಶಿಫಾರಸಿನಂತೆ ಪ್ರತಿ ವರ್ಷ ಶೇ. 5ರಷ್ಟು ದರ ಹೆಚ್ಚಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಕನಿಷ್ಠ ದರ: 10 ರಿಂದ 11ಕ್ಕೆ ಏರಿಕೆ.

ಗರಿಷ್ಠ ದರ: 90 ರಿಂದ 95ಕ್ಕೆ ಏರಿಕೆ.

ಕಳೆದ ವರ್ಷ (ಫೆಬ್ರವರಿ 2025) ಬಿಎಂಆರ್‌ಸಿಎಲ್ ದರವನ್ನು ಭಾರೀ ಪ್ರಮಾಣದಲ್ಲಿ (ಶೇ. 71.5) ಹೆಚ್ಚಳ ಮಾಡಿದಾಗ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಕುಸಿತ ಕಂಡಿದ್ದರಿಂದ, ಅನಿವಾರ್ಯವಾಗಿ ನಾಲ್ಕೇ ದಿನಗಳಲ್ಲಿ ಶೇ. 30ರಷ್ಟು ದರ ಇಳಿಕೆ ಮಾಡಲಾಗಿತ್ತು. ಈಗ ಮತ್ತೆ ದರ ಏರಿಕೆಯ ತೂಗುಗತ್ತಿ ಪ್ರಯಾಣಿಕರ ಮುಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !