ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಆಫ್ರಿಕಾದ ದಿಗ್ಗಜ, ಆರ್‌ಸಿಬಿ ತಂಡದ ಆಪತ್ಭಾಂದವ ಎಂದೇ ಖ್ಯಾತರಾಗಿದ್ದ ಎಬಿ ಡಿವಿಲಿಯರ್ಸ್ ಅವರ ಪುತ್ರ ಇದೀಗ ಕ್ರಿಕೆಟ್ ಜಗತ್ತಿಗೆ ಕಾಲಿರಿಸಿದ್ದು, ತಂದೆಯಂತೆಯೇ ಅಬ್ಬರಿಸಲು ಸಿದ್ಧರಾಗಿದ್ದಾರೆ. ಕೇವಲ 10 ವರ್ಷದವರಾಗಿರುವ ಡಿವಿಲಿಯರ್ಸ್ ಅವರ ಮಗ, ಸ್ಥಳೀಯ ಕ್ರಿಕೆಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿ ಗಮನ ಸೆಳೆದಿದ್ದಾರೆ.
ಈ ಸಂತಸದ ಸುದ್ದಿಯನ್ನು ಸ್ವತಃ ಎಬಿ ಡಿವಿಲಿಯರ್ಸ್ ಅವರೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಎಬಿಡಿ ಅವರ ಪತ್ನಿ ಡೇನಿಯಲ್ ಅವರು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಗನ ಸಾಧನೆಯನ್ನು ಮೊದಲು ಪ್ರಕಟಿಸಿದ್ದರು. ಆ ಪೋಸ್ಟ್ ಅನ್ನು ಮರು-ಪೋಸ್ಟ್ ಮಾಡಿದ ಎಬಿ ಡಿವಿಲಿಯರ್ಸ್, “ಓ ದೇವರೇ! ನಮ್ಮ ಮಗು ಎಬಿ ತನ್ನ ಮೊದಲ ಅರ್ಧಶತಕ ಬಾರಿಸಿದ್ದಾನೆ” ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್‌ಗೆ ನೆಟ್ಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಲವು ಅಭಿಮಾನಿಗಳು, “ನಿಮ್ಮ ಮಗ ಭವಿಷ್ಯದಲ್ಲಿ ವಿರಾಟ್ ಕೊಹ್ಲಿ ಅವರ ಪುತ್ರ ಅಕಾಯ್ ಕೊಹ್ಲಿ ಅವರೊಂದಿಗೆ ಆರ್‌ಸಿಬಿ ತಂಡವನ್ನು ಸೇರಿ ಆಡಲಿ,” ಎಂದು ಹಾರೈಸಿದ್ದಾರೆ.

2021 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರೂ, ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್‌ಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಲೆಜೆಂಡ್ಸ್ ಲೀಗ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿ ಚೊಚ್ಚಲ ಚಾಂಪಿಯನ್ ಆಗಿ ಹೊರಹೊಮ್ಮಲು ಯಶಸ್ವಿಯಾಗಿದ್ದರು. ಕ್ರಿಕೆಟ್ ಹೊರತಾಗಿಯೂ ತಮ್ಮ ಹೇಳಿಕೆಗಳು ಮತ್ತು ಸಕ್ರಿಯ ಸಾಮಾಜಿಕ ಮಾಧ್ಯಮ ಉಪಸ್ಥಿತಿಯಿಂದಾಗಿ ಎಬಿಡಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಮಗನ ಈ ಪ್ರಮುಖ ಮೈಲಿಗಲ್ಲಿನ ಸುದ್ದಿ ಹಂಚಿಕೊಳ್ಳುವ ಮೂಲಕ ಅವರು ಅಭಿಮಾನಿಗಳಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದಾರೆ.

