ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿನ ಆರು ಲಕ್ಷ ಸರ್ಕಾರಿ ನೌಕರರ ಕುಟುಂಬಗಳಿಗೆ ಸಿಹಿ ಸುದ್ದಿ! ಪೊಲೀಸ್ ಮತ್ತು ಸೇನಾ ಕ್ಯಾಂಟೀನ್‌ಗಳ ಮಾದರಿಯಲ್ಲಿ, ರಾಜ್ಯದ ಸರ್ಕಾರಿ ನೌಕರರಿಗೆ ದಿನನಿತ್ಯದ ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ (MSIL) ವತಿಯಿಂದ ಸೂಪರ್ ಮಾರ್ಕೆಟ್‌ಗಳನ್ನು ಆರಂಭಿಸುವ ಚಿಂತನೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ಈ ಕುರಿತು ಸಚಿವರು ಬುಧವಾರ ಖನಿಜ ಭವನದಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸುತ್ತಿನ ಸಭೆ ನಡೆಸಿದರು.
ಸಭೆಯ ಬಳಿಕ ಮಾಹಿತಿ ನೀಡಿದ ಅವರು, “ಪೊಲೀಸ್ ಮತ್ತು ಅರೆ ಸೇನಾ ಪಡೆಗಳ ನೌಕರರಿಗೆ ಈಗಾಗಲೇ ಇಂತಹ ಕ್ಯಾಂಟೀನ್ ಸೌಲಭ್ಯವಿದೆ. ರಾಜ್ಯದಲ್ಲಿರುವ 6 ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಕುಟುಂಬಗಳ ಹಿತದೃಷ್ಟಿಯಿಂದ ಇದೊಂದು ಮಹತ್ವದ ಉಪಕ್ರಮವಾಗಲಿದೆ,” ಎಂದರು.
ಈ ಯೋಜನೆಯ ಅನುಷ್ಠಾನಕ್ಕಾಗಿ ಸಬ್ಸಿಡಿ ಅಥವಾ ತೆರಿಗೆ ವಿನಾಯಿತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಇಲಾಖೆಯ ಜೊತೆ ಚರ್ಚೆ ನಡೆಸಲು ಉದ್ದೇಶಿಸಲಾಗಿದೆ. ಉದ್ದೇಶಿತ ಎಂಎಸ್‌ಐಎಲ್ ಸೂಪರ್ ಮಾರ್ಕೆಟ್‌ನಲ್ಲಿ ದವಸ-ಧಾನ್ಯಗಳಿಂದ ಹಿಡಿದು ಎಫ್‌ಎಂಸಿಜಿ ವಲಯದ ಪ್ರತಿಯೊಂದು ಪದಾರ್ಥವೂ ರಿಯಾಯಿತಿ ದರದಲ್ಲಿ ಸಿಗುವಂತೆ ಮಾಡುವ ಗುರಿ ಹೊಂದಲಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ 4-5 ಮಳಿಗೆಗಳನ್ನು ತೆರೆಯಲು ಯೋಚಿಸಲಾಗಿದ್ದು, ನಂತರದ ದಿನಗಳಲ್ಲಿ ಈ ಸೌಲಭ್ಯವನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸುವ ಆಲೋಚನೆ ಇದೆ. ಈ ಸೂಪರ್ ಮಾರ್ಕೆಟ್‌ಗಳ ಆರಂಭದ ಸಾಧ್ಯಾಸಾಧ್ಯತೆಗಳ ಕುರಿತು ಒಂದು ತಿಂಗಳೊಳಗೆ ವಿಸ್ತೃತ ವರದಿ ಸಲ್ಲಿಸುವಂತೆ ಎಂಎಸ್‌ಐಎಲ್‌ಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವರದಿ ಬಂದ ನಂತರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

