ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಐತಿಹಾಸಿಕ ಬಸವನಗುಡಿ ‘ಕಡಲೆಕಾಯಿ ಪರಿಷೆ’ಗೆ ಈ ವರ್ಷದ ದಿನಾಂಕ ನಿಗದಿಯಾಗಿದ್ದು, ಮುಂದಿನ ತಿಂಗಳು ನವೆಂಬರ್ 17 ಮತ್ತು 18 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಲಿದೆ.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಪರಿಷೆಯು ಶ್ರೀ ದೊಡ್ಡಗಣಪತಿ ದೇವಾಲಯದ ಆವರಣದಲ್ಲಿ ನಡೆಯುತ್ತದೆ. ಪ್ರತಿವರ್ಷ ಲಕ್ಷಾಂತರ ಜನರನ್ನು ಆಕರ್ಷಿಸುವ ಈ ವಿಶಿಷ್ಟ ಜಾತ್ರೆಯನ್ನು ಈ ಬಾರಿಯೂ ಯಾವುದೇ ಲೋಪವಿಲ್ಲದೆ, ಅದ್ದೂರಿಯಾಗಿ ನೆರವೇರಿಸಲು ನಿರ್ಧರಿಸಲಾಗಿದೆ.
ಪರಿಷೆಯ ಯಶಸ್ವಿ ಆಯೋಜನೆ ಕುರಿತು ಸಿದ್ಧತಾ ಸಭೆಯನ್ನು ಸಾರಿಗೆ ಹಾಗೂ ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ಇದೇ ಗುರುವಾರ ನಡೆಸಲಾಗುವುದು. ಈ ಸಭೆಯಲ್ಲಿ ಸ್ಥಳೀಯ ಶಾಸಕರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಪ್ರಮುಖವಾಗಿ, ವ್ಯಾಪಾರಿಗಳಿಂದ ಯಾವುದೇ ರೀತಿಯ ಸುಂಕ ವಸೂಲಾತಿಯನ್ನು ನಿಷೇಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಜೊತೆಗೆ, ಈ ವರ್ಷದ ಪರಿಷೆಯಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂಬುದರ ಬಗ್ಗೆಯೂ ಸಭೆಯಲ್ಲಿ ನಿರ್ಧಾರಗಳನ್ನು ಬಹಿರಂಗಪಡಿಸಲಿದ್ದಾರೆ.
ಸಾಂಪ್ರದಾಯಿಕ ಕಡಲೆಕಾಯಿ ಪರಿಷೆಯ ಸಂಭ್ರಮಕ್ಕೆ ದಿನಗಣನೆ ಶುರುವಾಗಿದ್ದು, ರೈತರು ಹಾಗೂ ವ್ಯಾಪಾರಿಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ.