April 13, 2026
Monday, April 13, 2026
spot_img

ಮುಂಬೈ ಸತತ ಸೋಲಿಗೆ ಕಾರಣ ಬಿಚ್ಚಿಟ್ಟ ನಾಯಕ: ಮುಂದಿನ ಪಂದ್ಯಕ್ಕೆ ‘ಮಾಸ್ಟರ್ ಪ್ಲಾನ್’ ಸಿದ್ಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್‌ನ 20ನೇ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 18 ರನ್‌ಗಳ ಸೋಲನುಭವಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 240 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಈ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, ರದರ್‌ಫೋರ್ಡ್ ಅವರ ಹೋರಾಟದ ನಡುವೆಯೂ 222 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾವು ಪಂದ್ಯದ ಮೇಲೆ ನಿಯಂತ್ರಣ ಸಾಧಿಸುವ ಬದಲು, ಎದುರಾಳಿ ನೀಡಿದ ಸವಾಲನ್ನು ಬೆನ್ನಟ್ಟುವ ಸ್ಥಿತಿಯಲ್ಲಿದ್ದೇವೆ. ಮುಖ್ಯವಾಗಿ ಪವರ್‌ಪ್ಲೇ ಅವಧಿಯಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಅನುಭವಿಸುತ್ತಿರುವುದು ನಮಗೆ ದೊಡ್ಡ ಹಿನ್ನಡೆಯಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ಸಾಮಾನ್ಯವಾಗಿ ವಾಂಖೆಡೆಯಲ್ಲಿ ಚೇಸಿಂಗ್ ತಂಡಕ್ಕೆ ಲಾಭವಾಗುತ್ತದೆ. ಆದರೆ ಮುಂಬೈ ವಿಷಯದಲ್ಲಿ ಈ ತಂತ್ರ ಉಲ್ಟಾ ಹೊಡೆಯುತ್ತಿದೆ. ಟಾಸ್ ಗೆದ್ದರೂ ಪಂದ್ಯ ಗೆಲ್ಲಲು ಸಾಧ್ಯವಾಗುತ್ತಿಲ್ಲ ಎಂಬ ಕಹಿಸತ್ಯವನ್ನು ಒಪ್ಪಿಕೊಂಡ ಪಾಂಡ್ಯ, ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಅಥವಾ ಬೌಲಿಂಗ್ ಆಯ್ಕೆಯ ಬಗ್ಗೆ ಮರುಚಿಂತನೆ ಮಾಡಬೇಕಿದೆ ಎಂಬ ಸುಳಿವು ನೀಡಿದ್ದಾರೆ.

ಸೋಲಿನ ನಡುವೆಯೂ ಶರ್ಫೇನ್ ರದರ್‌ಫೋರ್ಡ್ ಅವರ ಸ್ಫೋಟಕ ಬ್ಯಾಟಿಂಗ್ ಹಾರ್ದಿಕ್‌ಗೆ ಆಶಾದಾಯಕವಾಗಿ ಕಂಡಿದೆ. ಮಧ್ಯಮ ಕ್ರಮಾಂಕದ ಈ ಬಲವನ್ನು ಬಳಸಿಕೊಂಡು ಮುಂದಿನ ಪಂದ್ಯಗಳಲ್ಲಿ ತಂಡದ ಸಂಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡುವ ಭರವಸೆಯನ್ನು ಅವರು ನೀಡಿದ್ದಾರೆ.

ಸದ್ಯ ನಾಲ್ಕು ಪಂದ್ಯಗಳಲ್ಲಿ ಮೂರನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಈಗ ಕೆಲವು ದಿನಗಳ ಬಿಡುವು ಸಿಕ್ಕಿದೆ. ಈ ವಿರಾಮದ ಅವಧಿಯಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು, ಪಂಜಾಬ್ ಕಿಂಗ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ಹೊಸ ಹುರುಪಿನೊಂದಿಗೆ ಕಂಬ್ಯಾಕ್ ಮಾಡುವ ವಿಶ್ವಾಸದಲ್ಲಿ ಮುಂಬೈ ಪಡೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !