ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಕೇವಲ ಮಹಾರಾಷ್ಟ್ರಕ್ಕೆ ಸೇರಿದ ನಗರವಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿದೆ ಎಂದು ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ನೀಡಿದ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ
ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಇದೇ 15 ರಂದು ನಡೆಯಲಿದೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿವೆ. ಈ ನಡುವೆ ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರದ ವೇಳೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮುಂಬೈ ಕೇವಲ ಮಹಾರಾಷ್ಟ್ರಕ್ಕೆ ಸೇರಿದ ನಗರವಲ್ಲ. ಇದು ಅಂತಾರಾಷ್ಟ್ರೀಯ ಮಟ್ಟದ ನಗರವಾಗಿದೆ ಎಂದಿದ್ದರು. ಇದನ್ನು ವಿಪಕ್ಷಗಳು ಟೀಕಿಸಿದ್ದು, ಮುಂಬೈ ಎಂದೆಂದಿಗೂ ಮಹಾರಾಷ್ಟ್ರಕ್ಕೆ ಸೇರಿದ್ದು, ಇದನ್ನು ರಾಜ್ಯದಿಂದ ಬೇರ್ಪಡಿಸಲಾಗದು ಎಂದು ಹೇಳಿವೆ.
ಮುಂಬೈಗೆ ತ್ರಿವಳಿ ಎಂಜಿನ್ ಸರ್ಕಾರ ಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಹೀಗಾಗಿ, ಮುಂಬೈನಲ್ಲಿ ಬಿಜೆಪಿ ಮೇಯರ್ ಬೇಕಾಗಿದೆ. ಮುಂಬೈ ಜಾಗತಿಕ ಮಹಾನಗರವಾಗಿದ್ದು, ಇದು 40 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಜೆಟ್ ಹೊಂದಿದೆ. ಬೆಂಗಳೂರಿನ ಬಜೆಟ್ 19 ಸಾವಿರ ಕೋಟಿ ರೂ.ಗಳಾಗಿದ್ದರೆ, ಚೆನ್ನೈನ ಬಜೆಟ್ 8 ಸಾವಿರ ಕೋಟಿ ರೂಪಾಯಿ. ಅದಕ್ಕಾಗಿಯೇ ಮುಂಬೈನಂತಹ ನಗರಕ್ಕೆ ಪರಿಣಾಮಕಾರಿ ನಿರ್ವಹಣೆ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದರು.
ಅಣ್ಣಾಮಲೈ ಅವರ ಹೇಳಿಕೆಯನ್ನು ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಶಿವಸೇನೆ (ಯುಬಿಟಿ) ವಕ್ತಾರ ಮತ್ತು ಸಂಸದ ಸಂಜಯ್ ರಾವತ್ ಮತ್ತು ಎನ್‌ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ ಅವರು ಖಂಡಿಸಿದ್ದಾರೆ.
ಅಣ್ಣಾಮಲೈ ಅವರ ಹೇಳಿಕೆಗಳು ಮುಂಬೈ ಮತ್ತು ಮಹಾರಾಷ್ಟ್ರದ ಗುರುತಿಗೆ ಅವಮಾನ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಂಜಯ್ ರಾವತ್ ಆಗ್ರಹಿಸಿದರೆ, ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದು, ಮಹಾರಾಷ್ಟ್ರದ ಅವಿಭಾಜ್ಯ ಅಂಗವಾಗಿಯೇ ಉಳಿಯುತ್ತದೆ. ಮಹಾರಾಷ್ಟ್ರ ಮತ್ತು ಮುಂಬೈ ಬೇರ್ಪಡಿಸಲಾಗದವು ಎಂದು ಸುಪ್ರಿಯಾ ಸುಳೆ ಅವರು ಹೇಳಿದರು.
ಅಣ್ಣಾಮಲೈ ಹೇಳಿಕೆಗೆ ಸಿಎಂ ಸ್ಪಷ್ಟನೆ
ವಿವಾದ ಭುಗಿಲೆದ್ದ ಬೆನ್ನಲ್ಲೇ ಸ್ಪಷ್ಟೀಕರಣ ನೀಡಿರುವ ಸಿಎಂ ದೇವೇಂದ್ರ ಫಡ್ನವೀಸ್ ಅವರು, “ಅಣ್ಣಾಮಲೈ ಅವರ ಹೇಳಿಕೆಯ ಉದ್ದೇಶ ಒಳ್ಳೆಯದಾಗಿದೆ. ಸೂರ್ಯ ಮತ್ತು ಚಂದ್ರರು ಇರುವವರೆಗೂ ಮುಂಬೈ ಮಹಾರಾಷ್ಟ್ರದ ಭಾಗವಾಗಿಯೇ ಇರುತ್ತದೆ” ಎಂದು ಹೇಳಿದ್ದಾರೆ.

