Sunday, November 2, 2025

ಮುಂಬೈ | 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ ಪೊವೈ ಪ್ರದೇಶದ ರಾ ಸ್ಟುಡಿಯೋದಲ್ಲಿ ಆಡಿಷನ್‌ಗಾಗಿ ಕರೆಸಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಎನ್‌ಕೌಂಟರ್‌ನಲ್ಲಿ ಪೊಲೀಸರು ಕೊಂದಿದ್ದಾರೆ.

ಪೊಲೀಸ್ ಕಾರ್ಯಾಚರಣೆಯ ಸಮಯದಲ್ಲಿ ಆರೋಪಿ ರೋಹಿತ್ ಆರ್ಯ ಮೇಲೆ ಗುಂಡು ಹಾರಿಸಲಾಗಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅಲ್ಲಿ ಆತ ಸಾವು ಕಂಡಿದ್ದಾನೆ.

ರೋಹಿತ್ ಮಧ್ಯಾಹ್ನ 1.45ಕ್ಕೆ 17 ಮಕ್ಕಳು, ಒಬ್ಬ ಹಿರಿಯ ನಾಗರಿಕ ಮತ್ತು ಒಬ್ಬ ನಾಗರಿಕನನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ. ಕಾರ್ಯಾಚರಣೆಯ ಒಂದು ಗಂಟೆಯೊಳಗೆ ಪೊಲೀಸರು ಮತ್ತು ವಿಶೇಷ ಕಮಾಂಡೋಗಳು ಎಲ್ಲಾ ಒತ್ತೆಯಾಳುಗಳನ್ನು ರಕ್ಷಿಸಿದರು.

ಈ ವೇಳೆ ಘಟನಾ ಸ್ಥಳದಿಂದ ಏರ್‌ಗನ್ ಮತ್ತು ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಯು 100 ಕ್ಕೂ ಹೆಚ್ಚು ಮಕ್ಕಳನ್ನು ಆಡಿಷನ್‌ಗೆ ಆಹ್ವಾನಿಸಿದ್ದನು.

ಒತ್ತೆಯಾಳಾಗಿ ತೆಗೆದುಕೊಂಡ ನಂತರ, ರೋಹಿತ್ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಹಂಚಿಕೊಂಡರು, ಅದರಲ್ಲಿ ಅವರು ಕೆಲ ವಿಚಾರ ಮಾತನಾಡಿದ್ದಾರೆ.

‘ನಾನು ರೋಹಿತ್ ಆರ್ಯ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು, ನಾನು ಒಂದು ಯೋಜನೆಯನ್ನು ರೂಪಿಸಿದ್ದೇನೆ ಮತ್ತು ಕೆಲವು ಮಕ್ಕಳನ್ನು ಇಲ್ಲಿ ಒತ್ತೆಯಾಳುಗಳಾಗಿ ಇರಿಸಿದ್ದೇನೆ. ನನ್ನ ಬಳಿ ಹೆಚ್ಚಿನ ಬೇಡಿಕೆಗಳಿಲ್ಲ. ನನಗೆ ತುಂಬಾ ಸರಳವಾದ ಬೇಡಿಕೆಗಳು, ನೈತಿಕ ಬೇಡಿಕೆಗಳು ಮತ್ತು ಕೆಲವು ಪ್ರಶ್ನೆಗಳಿವೆ. ನಾನು ಕೆಲವು ಜನರೊಂದಿಗೆ ಮಾತನಾಡಲು, ಅವರಿಗೆ ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ ಮತ್ತು ಅವರ ಉತ್ತರಗಳಿಗೆ ಪ್ರತಿಕ್ರಿಯೆಯಾಗಿ ನನಗೆ ಯಾವುದೇ ಪ್ರಶ್ನೆಗಳಿದ್ದರೆ, ನಾನು ಅವರನ್ನೂ ಕೇಳಲು ಬಯಸುತ್ತೇನೆ, ಆದರೆ ನನಗೆ ಈ ಉತ್ತರಗಳು ಬೇಕು.’ ನನಗೆ ಬೇರೆ ಏನೂ ಬೇಡ. ನಾನು ಭಯೋತ್ಪಾದಕನಲ್ಲ, ಅಥವಾ ನಾನು ಹೆಚ್ಚು ಹಣವನ್ನು ಬೇಡುವುದಿಲ್ಲ, ಮತ್ತು ನಾನು ಯಾವುದೇ ಅನೈತಿಕ ಬೇಡಿಕೆಗಳನ್ನು ಮಾಡುತ್ತಿಲ್ಲ. ನಾನು ಯೋಜನೆಯ ಭಾಗವಾಗಿ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿದ್ದೇನೆ. ನನ್ನನ್ನು ಕೆರಳಿರುವ ಪ್ರಯತ್ನ ಮಾಡಿದರೆ, ನಾನು ಈ ಸ್ಥಳಕ್ಕೆ (ಸ್ಟುಡಿಯೋ) ಬೆಂಕಿ ಹಚ್ಚುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಈ ಯೋಜನೆಯನ್ನು ರೂಪಿಸಿದ್ದೇನೆ. ನನ್ನನ್ನು ಕೆರಳಿಸಬೇಡಿ, ಇಲ್ಲದಿದ್ದರೆ ಮಕ್ಕಳಿಗೆ ಹಾನಿ ಮಾಡುವ ಕ್ರಮಗಳನ್ನು ನಾನು ತೆಗೆದುಕೊಳ್ಳುತ್ತೇನೆ’ ಎಂದಿದ್ದನು.

ಪೊಲೀಸರು ಆ ಮಕ್ಕಳನ್ನು ಕಾಪಾಡಲು ಸ್ಟುಡಿಯೋದ ಬಾತ್​ರೂಂ ಮೂಲಕ ಆರ್‌ಎ ಸ್ಟುಡಿಯೋವನ್ನು ಪ್ರವೇಶಿಸಿದ್ದರು. ಈ ವೇಳೆ ಆರೋಪಿ ರೋಹಿತ್ ಆರ್ಯ ಏರ್ ಗನ್‌ ಹಿಡಿದು ನಿಂತಿದ್ದರು. ಅಲ್ಲದೆ, ಅವರ ಬಳಿ ಕೆಲವು ರಾಸಾಯನಿಕ ವಸ್ತುಗಳು ಕೂಡ ಇದ್ದವು. ಪೊಲೀಸ್ ಅಧಿಕಾರಿಗಳು ಪದೇ ಪದೇ ಶರಣಾಗುವಂತೆ ಆತನಿಗೆ ಸೂಚಿಸಿದ್ದರು. ಆದರೆ ಆತ ಅದಕ್ಕೆ ಒಪ್ಪಲಿಲ್ಲ. ಶೂಟ್ ಮಾಡುವುದಾಗಿಯೂ ಪೊಲೀಸರು ಹೆದರಿಸಿದ್ದರು. ಅದಕ್ಕೂ ಆತ ಬಗ್ಗಲಿಲ್ಲ. ಬೇರೆ ದಾರಿಯಿಲ್ಲದೆ ರೋಹಿತ್ ಆರ್ಯನಿಂದ ಮಕ್ಕಳ ಜೀವಕ್ಕೆ ಅಪಾಯವಾಗಬಹುದು ಎಂದು ಪೊಲೀಸರು ಆತನ ಮೇಲೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದರು. ಅವರನ್ನು ತಕ್ಷಣ ಚಿಕಿತ್ಸೆಗಾಗಿ ಜೋಗೇಶ್ವರಿ ಟ್ರಾಮಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ಗುಂಡು ಹಾರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!