ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಪ್ರೀಮಿಯರ್ ಲೀಗ್ 2026ರ ಮೊದಲ ಪಂದ್ಯವೇ ಅಭಿಮಾನಿಗಳಿಗೆ ಉಸಿರುಗಟ್ಟಿಸುವ ರೋಮಾಂಚನ ನೀಡಿತು. ನಾಡಿನ್ ಡಿ ಕ್ಲರ್ಕ್ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಟೂರ್ನಿಗೆ ಭರ್ಜರಿ ಚಾಲನೆ ನೀಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಸಜೀವನ್ ಸಜನಾ 45 ರನ್‌ಗಳೊಂದಿಗೆ ಟಾಪ್ ಸ್ಕೋರರ್ ಆಗಿದ್ದರೆ, ನಿಕೋಲಾ ಕ್ಯಾರಿ 40, ಗುಣಲನ್ ಕಮಲಿನಿ 32 ಮತ್ತು ಹರ್ಮನ್‌ಪ್ರೀತ್ ಕೌರ್ 20 ರನ್‌ಗಳ ಕೊಡುಗೆ ನೀಡಿದರು. ಆರ್‌ಸಿಬಿ ಪರ ನಾಡಿನ್ ಡಿ ಕ್ಲರ್ಕ್ 4 ವಿಕೆಟ್ ಕಿತ್ತು ಮಿಂಚಿದರು.
ಇದನ್ನೂ ಓದಿ: FOOD |ನುಗ್ಗೇಕಾಯಿಯಿಂದ ಟೇಸ್ಟಿ ಗ್ರೇವಿನೂ ಮಾಡ್ಬೋದು, ಸಿಂಪಲ್ ರೆಸಿಪಿ ಇಂದೇ ಟ್ರೈ ಮಾಡಿ
ಗುರಿ ಬೆನ್ನಟ್ಟಿದ ಆರ್‌ಸಿಬಿಗೆ ಉತ್ತಮ ಆರಂಭ ಸಿಕ್ಕರೂ, ಗ್ರೇಸ್ ಹ್ಯಾರಿಸ್ (25) ಮತ್ತು ನಾಯಕಿ ಸ್ಮೃತಿ ಮಂಧಾನಾ (18) ಔಟಾದ ಬಳಿಕ ತಂಡ ಸಂಕಷ್ಟಕ್ಕೆ ಸಿಲುಕಿತು. 65 ರನ್‌ಗೆ 5 ವಿಕೆಟ್ ಕಳೆದುಕೊಂಡು ಸೋಲು ಹತ್ತಿರವಾದಂತೆ ಕಂಡಿತು.
ಆದರೆ ಈ ವೇಳೆ ನಾಡಿನ್ ಡಿ ಕ್ಲರ್ಕ್ ಜವಾಬ್ದಾರಿ ಹೊತ್ತುಕೊಂಡರು. 44 ಬಾಲ್‌ಗಳಲ್ಲಿ 63 ರನ್‌ಗಳ ಅಮೋಘ ಇನ್ನಿಂಗ್ಸ್ (7 ಫೋರ್, 2 ಸಿಕ್ಸರ್) ಆಡಿದ ಅವರು ತಂಡವನ್ನು ಗೆಲುವಿನ ದಡ ಸೇರಿಸಿದರು. ಅರುಂಧತಿ ರೆಡ್ಡಿ (20) ಸಹಾಯಕ ಪಾತ್ರ ವಹಿಸಿದರು. ಕೊನೆ ಓವರ್‌ವರೆಗೂ ಕಾದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿ ಅಭಿಮಾನಿಗಳಿಗೆ ಸಂಭ್ರಮ ನೀಡಿತು.

