Tuesday, December 16, 2025

ಟಿ20 ಚೇಸಿಂಗ್ ದಾಖಲೆ ಪಟ್ಟಿಯಲ್ಲಿ ಮುಂಬೈಗೆ 2ನೇ ಸ್ಥಾನ: ಜೈಸ್ವಾಲ್ ಶತಕದ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೂಪರ್ ಲೀಗ್ ಹಂತದಲ್ಲಿ ಮುಂಬೈ ತಂಡವು ತನ್ನ ಬ್ಯಾಟಿಂಗ್ ಶಕ್ತಿಯನ್ನು ಪ್ರದರ್ಶಿಸಿತು. ಪುಣೆಯ ಡಿವೈ ಪಾಟೀಲ್ ಅಕಾಡೆಮಿ ಸ್ಟೇಡಿಯಂನಲ್ಲಿ ನಡೆದ ಹೈ-ಸ್ಕೋರಿಂಗ್ ಪಂದ್ಯದಲ್ಲಿ ಹರ್ಯಾಣ ನೀಡಿದ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ, ಯುವ ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರ ಸ್ಪೋಟಕ ಶತಕದ ನೆರವಿನಿಂದ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿತು.

ಟಾಸ್ ಗೆದ್ದ ಮುಂಬೈ ನಾಯಕ ಶಾರ್ದೂಲ್ ಠಾಕೂರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ ತಂಡವು ನಾಯಕ ಅಂಕಿತ್ ಕುಮಾರ್ (42 ಎಸೆತಗಳಲ್ಲಿ 89 ರನ್) ಮತ್ತು ನಿಶಾಂತ್ ಸಿಂಧು (ಅಜೇಯ 63 ರನ್) ಅವರ ಆಕರ್ಷಕ ಇನ್ನಿಂಗ್ಸ್‌ಗಳ ಬಲದಿಂದ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿ ಮುಂಬೈಗೆ ಕಠಿಣ ಸವಾಲು ನೀಡಿತು.

235 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಮುಂಬೈ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಹರ್ಯಾಣ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಅವರು ಕೇವಲ 48 ಎಸೆತಗಳಲ್ಲಿ ಭರ್ಜರಿ ಶತಕವನ್ನು ಪೂರೈಸುವ ಮೂಲಕ ತಂಡಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಜೈಸ್ವಾಲ್ 50 ಎಸೆತಗಳಲ್ಲಿ 1 ಸಿಕ್ಸರ್ ಮತ್ತು 16 ಬೌಂಡರಿಗಳ ಸಹಿತ 101 ರನ್ ಗಳಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದರು.

ಜೈಸ್ವಾಲ್‌ಗೆ ಉತ್ತಮ ಸಾಥ್ ನೀಡಿದ ಮೂರನೇ ಕ್ರಮಾಂಕದ ಬ್ಯಾಟರ್ ಸರ್ಫರಾಝ್ ಖಾನ್ ಕೇವಲ 25 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 64 ರನ್ ಚಚ್ಚಿ ರನ್‌ರೇಟ್ ಕಡಿಮೆ ಆಗದಂತೆ ನೋಡಿಕೊಂಡರು. ಇವರಿಬ್ಬರ ಅಬ್ಬರದಿಂದ ಮುಂಬೈ ಕೇವಲ 15 ಓವರ್‌ಗಳ ವೇಳೆಗೆ 200 ರನ್‌ಗಳ ಗಡಿ ದಾಟಿತು.

ಅಂತಿಮವಾಗಿ, ಮುಂಬೈ ತಂಡವು 17.3 ಓವರ್‌ಗಳಲ್ಲಿ 238 ರನ್ ಗಳಿಸಿ 4 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು. ವಿಶೇಷವೆಂದರೆ, ಇದು ಸೈಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಇತಿಹಾಸದಲ್ಲಿ ಎರಡನೇ ಗರಿಷ್ಠ ರನ್ ಚೇಸಿಂಗ್ ಆಗಿದೆ. ಈ ಹಿಂದೆ ಜಾರ್ಖಂಡ್ ತಂಡವು 236 ರನ್‌ಗಳನ್ನು ಚೇಸ್ ಮಾಡಿ ಗೆದ್ದಿದ್ದು ಶ್ರೇಷ್ಠ ದಾಖಲೆಯಾಗಿದೆ. ಈ ಗೆಲುವಿನ ಮೂಲಕ ಮುಂಬೈ ಟೂರ್ನಿಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.

error: Content is protected !!