ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೆಜ್ಜಲಗೆರೆ ಗ್ರಾಮ ಪಂಚಾಯಿತಿಯನ್ನು ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಬೆಂಬಲ ಸೂಚಿಸಿದ ಅವರು, ಕೂಡಲೇ ಈ ಆದೇಶವನ್ನು ರದ್ದುಗೊಳಿಸಬೇಕೆಂದು ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದರು.
“ಗ್ರಾಮಗಳು ಅಭಿವೃದ್ಧಿಯಾಗಬೇಕು ಮತ್ತು ಸ್ಥಳೀಯವಾಗಿ ಸವಲತ್ತುಗಳು ಸಿಗಬೇಕು ಎಂಬುದು ಗಾಂಧೀಜಿಯವರ ಕನಸಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಹಳ್ಳಿಗಳನ್ನು ನಾಶಮಾಡಲು ಹೊರಟಿದೆ,” ಎಂದು ಅಶೋಕ್ ಟೀಕಿಸಿದರು. ಕಳೆದ 22 ದಿನಗಳಿಂದ ಗ್ರಾಮಸ್ಥರು ಬೀದಿಗಿಳಿದು ಹೋರಾಡುತ್ತಿದ್ದರೂ, ಸರ್ಕಾರ ಜನರ ಭಾವನೆಗಳಿಗೆ ಬೆಲೆ ನೀಡುತ್ತಿಲ್ಲ ಎಂದು ಅವರು ದೂರಿದರು.
ಗೆಜ್ಜಲಗೆರೆ ಸುತ್ತಮುತ್ತ ಸಾವಿರಾರು ಎಕರೆ ಫಲವತ್ತಾದ ಭತ್ತದ ಜಮೀನು ಇದೆ. ನಗರಸಭೆಗೆ ಸೇರ್ಪಡೆಯಾದರೆ ಕೃಷಿ ಚಟುವಟಿಕೆಗಳು ನಶಿಸಿ, ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ನಗರಸಭೆ ವ್ಯಾಪ್ತಿಗೆ ಬರುವುದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಗ್ರಾಮ ಪಂಚಾಯಿತಿಗಳಿಗೆ ಸಿಗುವ ವಿಶೇಷ ಅನುದಾನಗಳು ಹಾಗೂ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂದು ಅವರು ಎಚ್ಚರಿಸಿದರು.

