ಹೊಸದಿಗಂತ ವರದಿ, ವಿಜಯಪುರ:
ಯುವಕರಿಬ್ಬರ ಕೊಲೆ ಪ್ರಕರಣದ ಆರೋಪಿಗಳ ಬಂಧನಕ್ಕೆ ತೆರಳಿದ ವೇಳೆ, ಪೊಲೀಸರ ಮೇಲೆ ಬೈಕ್ ಹಾಯಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡು ಹಾರಿಸಿ, ಪೊಲೀಸರು ಬಂಧಿಸಿದ ಘಟನೆ ವಿಜಯಪುರ ತಾಲೂಕಿನ ಕನ್ನೂರು ಗ್ರಾಮದ ಬಳಿ ನಡೆದಿದೆ.
ಇಲ್ಲಿನ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ ಕೊಲೆ ಮಾಡಿದ ಪ್ರಕರಣದ ಐದು ಜನ ಆರೋಪಿಗಳ ಪೈಕಿ, ಓರ್ವ ಆರೋಪಿ ಅಕ್ಷಯ ಶಿವಾನಂದ ಜುಲಜುಲೆ ಪೊಲೀಸರ ಮೇಲೆ ಬೈಕ್ ಹಾಯಿಸಿ, ಹಲ್ಲೆಗೆ ಮುಂದಾಗಿ, ಪರಾರಿಯಾಗಲು ಯತ್ನಿಸುತ್ತಿದ್ದಂತೆ, ಪೊಲೀಸ್ ಅಧಿಕಾರಿ ರಾಯಗೊಂಡ ಜಾನರ್, ಆರೋಪಿ ಅಕ್ಷಯ ಜುಲಜುಲೆ ಕಾಲಿಗೆ ಗುಂಡು ಹಾರಿಸಿದ್ದು, ಆರೋಪಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಇನ್ನು ಇತರೆ ನಾಲ್ಕು ಜನ ಆರೋಪಿಗಳಾದ ಭರತ, ಸಂಜಯ್, ಸಂತೋಷ, ಮಲ್ಲನಗೌಡ ಇವರನ್ನು ಬಂಧಿಸಲಾಗಿದೆ.
ಕಳೆದ 2023 ರಲ್ಲಿ ಈರನಗೌಡ ಪಾಟೀಲ್ ಮೇಲೆ ಹಲ್ಲೆ ಮಾಡಿದ್ದ ಸಾಗರ ಬೆಳ್ಳುಂಡಗಿ ಹಾಗೂ ಇಸಾಕ್ ಖರೇಷಿ, ಈರನಗೌಡ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಂಟು ತಿಂಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಇದಕ್ಕೆ ಪ್ರತೀಕಾರವಾಗಿ ಈರನಗೌಡ ಸಹೋದರ ಮಲ್ಲನಗೌಡ ಆತನ ಮಕ್ಕಳು ಸೇರಿಕೊಂಡು ಸಾಗರ ಹಾಗೂ ಇಸಾಕ್ ಇವರನ್ನು ಕೊಲೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ ಲಕ್ಷ್ಮಣ ನಿಂಬರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.