ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಸೌಂದರ್ಯಕ್ಕೆ ಬೇರೆ ಯಾರೂ ಸರಿಸಾಟಿಯಾಗಬಾರದು ಎಂಬ ವಿಚಿತ್ರ ಅಸೂಯೆಯ ಕಾರಣಕ್ಕಾಗಿ ಮಹಿಳೆಯೊಬ್ಬಳು ತನ್ನ 6 ವರ್ಷದ ಬಾಲಕಿಯನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್‌ನಲ್ಲಿ ನಡೆದಿದೆ. ನಾಲ್ಕು ಮಕ್ಕಳ ಸರಣಿ ಕೊಲೆ ಪ್ರಕರಣದಲ್ಲಿ ಈ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರಗಳು
ಸೋನಿಪತ್‌ನಲ್ಲಿ ನಡೆದ ಕುಟುಂಬದ ಮದುವೆ ಸಮಾರಂಭಕ್ಕಾಗಿ ಇಡೀ ಕುಟುಂಬವು ಪಾಣಿಪತ್‌ನ ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮದಲ್ಲಿ ನೆರೆದಿತ್ತು. ಈ ಸಂದರ್ಭದಲ್ಲಿ ಆರೋಪಿ ಪೂನಂ 6 ವರ್ಷದ ಬಾಲಕಿ ವಿಧಿಯನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ಪಾಲ್ ಸಿಂಗ್ ಮತ್ತು ಓಂವತಿ ಅವರ ಮೊಮ್ಮಗಳಾದ ವಿಧಿ, ತನ್ನ ತಂದೆ ಸಂದೀಪ್ ಮತ್ತು ತಾಯಿಯೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದಳು. ಮದುವೆ ಮನೆಯಲ್ಲಿ ವಿಧಿ ಕಾಣೆಯಾಗಿದ್ದಳು. ಎಲ್ಲಾ ಕಡೆ ಹುಡುಕಾಡಿದ ಬಳಿಕ, ವಿಧಿಯ ಅಜ್ಜಿ ಸಂಬಂಧಿಕರ ಮನೆಯ ಮೊದಲ ಮಹಡಿಯ ಸ್ಟೋರ್ ರೂಂನಲ್ಲಿ ಮೃತದೇಹವನ್ನು ಕಂಡು ಕೊಂಡಿದ್ದಾರೆ.
ಪೊಲೀಸರ ತನಿಖೆಯಿಂದ ಬಯಲಾಗಿರುವ ಸತ್ಯಾಂಶವು ಬೆಚ್ಚಿಬೀಳಿಸುವಂತಿದೆ. ಆರೋಪಿ ಪೂನಂ ತನಗಿಂತ ಬೇರೆ ಯಾರೂ ಸುಂದರವಾಗಿ ಕಾಣಬಾರದು ಎಂಬ ವಿಪರೀತ ಮನಸ್ಥಿತಿಯನ್ನು ಹೊಂದಿದ್ದಳು. ಈ ಅಸೂಯೆಯಿಂದಾಗಿಯೇ ಆಕೆ ಚಿಕ್ಕ ಮಕ್ಕಳು ಮತ್ತು ಸುಂದರ ಹುಡುಗಿಯರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡುತ್ತಿದ್ದಳು.
ಇದುವರೆಗೆ ಪೂನಂ ತನ್ನ ಸ್ವಂತ ಮಗ ಸೇರಿ ಒಟ್ಟು ನಾಲ್ಕು ಮಕ್ಕಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. ಎಲ್ಲ ಮಕ್ಕಳನ್ನೂ ನೀರಿನಲ್ಲಿ ಮುಳುಗಿಸಿಯೇ ಕೊಲೆ ಮಾಡಿದ್ದಳು.
ಸರಣಿ ಕೊಲೆಗಳ ಹಿನ್ನೆಲೆ
2023 ರಲ್ಲಿ: ಆಕೆ ಮೊದಲು ತನ್ನ ಅತ್ತಿಗೆಯ ಮಗಳನ್ನು ಕೊಲೆ ಮಾಡಿದ್ದಳು. ಅದೇ ವರ್ಷ ಅನುಮಾನ ಬರದಂತೆ ತನ್ನ ಸ್ವಂತ ಮಗನನ್ನೂ ನೀರಿನಲ್ಲಿ ಮುಳುಗಿಸಿ ಕೊಂದಿದ್ದಳು.
2024ರ ಆಗಸ್ಟ್‌ನಲ್ಲಿ: ಸಿವಾ ಗ್ರಾಮದಲ್ಲಿ ಮತ್ತೊಬ್ಬ ಹುಡುಗಿಯನ್ನು ಹತ್ಯೆ ಮಾಡಿದ್ದಳು.
ಈ ಎಲ್ಲಾ ಪ್ರಕರಣಗಳಲ್ಲೂ ಮಕ್ಕಳ ಸಾವನ್ನು ಆಕಸ್ಮಿಕವೆಂದು ಬಿಂಬಿಸಲಾಗಿತ್ತು. ಸರಣಿ ಕೊಲೆಗಳ ಹಿಂದಿನ ಭಯಾನಕ ಸತ್ಯ ಇದೀಗ ಹೊರಬಿದ್ದಿದ್ದು, ಪೊಲೀಸರು ಪೂನಂಳನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

