ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ದೇಗುಲಕ್ಕೆ ಭೇಟಿ ಕೊಟ್ಟ ಮುಸ್ಕಾನ್ ಮಿಶ್ರಾ: ಅಖಿಲೇಶ್ ಪಕ್ಷದ ಪ್ರಮುಖ ಹುದ್ದೆಯಿಂದ ವಜಾ!
ಸಮಾಜವಾದಿ ಪಕ್ಷದ ಯುವ ನಾಯಕಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ ಮುಸ್ಕಾನ್ ಮಿಶ್ರಾ ಅವರನ್ನು ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಲಾಗಿದೆ.
ಇದಕ್ಕೆ ಕಾರಣ ಅಯೋಧ್ಯೆಯ ಹನುಮಾನ್‌ಗಢಿ ದೇವಾಲಯದ ಮಹಾಂತ್ ರಾಜು ದಾಸ್ ಅವರೊಂದಿಗಿನ ಭೇಟಿಯ ವೈರಲ್ ವಿಡಿಯೋ. ಇದು ತಮ್ಮ ಸಿದ್ದಾಂತಗಳಿಗೆ ವಿರುದ್ಧವಾಗಿದ್ದು ಪಕ್ಷವು ಕಠಿಣ ಕ್ರಮ ಕೈಗೊಂಡಿದೆ ಪಕ್ಷ ಹೇಳಿದೆ.
ಮುಸ್ಕಾನ್ ಮಿಶ್ರಾ ಲಖನೌದ 25 ವರ್ಷದ ಯುವ ನಾಯಕಿ. ಸಮಾಜವಾದಿ ಪಕ್ಷದ ಡಿಜಿಟಲ್ ಪ್ರಚಾರದ ಮುಖವೆಂದು ಪರಿಗಣಿಸಲಾಗಿತ್ತು. ಅವರು ಇನ್‌ಸ್ಟಾಗ್ರಾಮ್‌ನಲ್ಲಿ 6.68 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಪಕ್ಷದ ಪ್ರಚಾರಕ್ಕೆ ಸಂಬಂಧಿಸಿದ ವೀಡಿಯೊಗಳು ಮತ್ತು ಪೋಸ್ಟ್‌ಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿದ್ದರು. ಅವರು 2024ರ ಸೆಪ್ಟೆಂಬರ್ 21ರಂದು ಸಮಾಜವಾದಿ ಪಕ್ಷವನ್ನು ಸೇರಿದ್ದು ನಂತರ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕಗೊಂಡರು.
ಇತ್ತ ಅಕ್ಟೋಬರ್ 13ರಂದು ಮುಸ್ಕಾನ್ ಮಿಶ್ರಾ ಅಯೋಧ್ಯೆಯ ಹನುಮಾನ್‌ಗಢಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ಮಹಾಂತ್ ರಾಜು ದಾಸ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು. ವೀಡಿಯೊ ವೈರಲ್ ಆದ ತಕ್ಷಣ, ಎಸ್‌ಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು. ಎಸ್‌ಪಿ ಸಂಸ್ಥಾಪಕರಾದ ಮುಲಾಯಂ ಸಿಂಗ್ ಯಾದವ್ ಮತ್ತು ಅಖಿಲೇಶ್ ಯಾದವ್ ಬಗ್ಗೆ ಪದೇ ಪದೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಮಹಂತ್ ಅವರನ್ನು ಅವರು ಹೇಗೆ ಭೇಟಿಯಾಗಬಹುದು ಎಂದು ಅನೇಕ ನಾಯಕರು ಪ್ರಶ್ನಿಸಿದರು.
ಎಸ್‌ಪಿ ಮಹಿಳಾ ಸಭಾ ರಾಷ್ಟ್ರೀಯ ಅಧ್ಯಕ್ಷೆ ಜೂಹಿ ಸಿಂಗ್ ತಕ್ಷಣ ಕ್ರಮ ಕೈಗೊಂಡರು. ಮುಸ್ಕಾನ್ ಮಿಶ್ರಾ ಅವರಿಗೆ ಪತ್ರವೊಂದನ್ನು ಬರೆದು, ಅವರ ನಡವಳಿಕೆಯು ಪಕ್ಷದ ಮೌಲ್ಯಗಳು ಮತ್ತು ಸಿದ್ಧಾಂತಕ್ಕೆ ವಿರುದ್ಧವಾಗಿರುವುದರಿಂದ ಅವರನ್ನು ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.