ಹೊಸದಿಗಂತ ಯಲ್ಲಾಪುರ:
ಮುಸ್ಲಿಂ ಯುವಕನಿಂದ ಮಹಿಳೆಯೊಬ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಪ್ರಮುಖ 4 ಜಮಾತ್ ಮಸೀದಿಗಳ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಬಲವಾಗಿ ಖಂಡಿಸಿರುವ ಮುಖಂಡರು, ಆರೋಪಿಗೆ ಕಠಿಣ ಶಿಕ್ಷೆಯಾಗಲಿ ಹಾಗೂ ಯಲ್ಲಾಪುರದ ಶಾಂತಿ ಕಾಪಾಡಲು ತಾವು ಬದ್ಧರಾಗಿರುವುದಾಗಿ ಘೋಷಿಸಿದ್ದಾರೆ.
ಯಲ್ಲಾಪುರದಲ್ಲಿ ನಡೆದ ಮಹಿಳೆಯ ಹತ್ಯೆಯು ಇಡೀ ತಾಲೂಕನ್ನು ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ತುರ್ತು ಸಭೆ ನಡೆಸಿದ ಮೋಹಿಲ್ಲಾ ಗೌಸಿಯಾ, ಜುಮ್ಮಾ ಮಸೀದಿ, ಬಿಲಾಲ ಮಸೀದಿ ಹಾಗೂ ಗರೀಬ್ ನವಾಜ್ ಮಸೀದಿಗಳ ಅಧ್ಯಕ್ಷರು ಮತ್ತು ಸದಸ್ಯರು ಘಟನೆಯನ್ನು ಖಂಡಿಸಿ ಜಂಟಿ ಹೇಳಿಕೆ ನೀಡಿದ್ದಾರೆ.
“ಯಲ್ಲಾಪುರದಲ್ಲಿ ನಾವು ಶತಮಾನಗಳಿಂದ ಎಲ್ಲ ಧರ್ಮದವರೊಂದಿಗೆ ಸೌಹಾರ್ದತೆಯಿಂದ, ಅಣ್ಣ-ತಮ್ಮಂದಿರಂತೆ ಬಾಳುತ್ತಿದ್ದೇವೆ. ಇಂತಹ ಅಘಾತಕಾರಿ ಘಟನೆ ನಮ್ಮ ಮಣ್ಣಿನಲ್ಲಿ ನಡೆದಿರುವುದು ಅತ್ಯಂತ ದುರದೃಷ್ಟಕರ. ತಪ್ಪಿತಸ್ಥನು ಯಾವುದೇ ಸಮುದಾಯದವನಾಗಿದ್ದರೂ ಆತನಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗಲೇಬೇಕು,” ಎಂದು ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಹತ್ಯೆಯನ್ನು ಪ್ರತಿಭಟಿಸಿ ಕರೆ ನೀಡಲಾದ ‘ಯಲ್ಲಾಪುರ ಬಂದ್’ ಗೆ ಮುಸ್ಲಿಂ ಸಮುದಾಯದ ಮುಖಂಡರು ತಮ್ಮ ಸಂಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ. ಶಾಂತಿ ಮತ್ತು ಸುಸ್ಥಿತಿಯನ್ನು ಕಾಪಾಡುವ ದೃಷ್ಟಿಯಿಂದ ಈ ಹೋರಾಟಕ್ಕೆ ತಾವೂ ಕೈಜೋಡಿಸುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

