ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಐತಿಹಾಸಿಕ ಕೋಟೆ ಶನಿವಾರ್ ವಾಡಾದಲ್ಲಿ ಕೆಲವು ಮುಸ್ಲಿಂ ಮಹಿಳೆಯರು ನಮಾಜ್ ಮಾಡಿರುವುದು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಮುಸ್ಲಿಂ ಮಹಿಳೆಯರು ನಮಾಜ್ ಮಾಡಿದ್ದ ಜಾಗವನ್ನು ಬಿಜೆಪಿ ರಾಜ್ಯಸಭಾ ಸಂಸದೆ ಮೇಧಾ ಕುಲಕರ್ಣಿ ಗೋಮೂತ್ರದಿಂದ ಶುದ್ಧೀಕರಿಸಿರುವ ಘಟನೆ ನಡೆದಿದೆ.
ಬಳಿಕ ಈ ಕುರಿತು ಬಿಜೆಪಿ ಸಂಸದೆ ಮೇಧಾ ಕುಲಕರ್ಣಿ ಮಾತನಾಡಿ, ಶನಿವಾರ್ ವಾಡಾ ನಮಾಜ್ ಮಾಡಲು ಸೂಕ್ತ ಸ್ಥಳವಲ್ಲ. ಆದರೆ ಈಗ ನಾವು ಶುದ್ಧೀಕರಣ ಮಾಡಿ, ಅಲ್ಲಿ ಶಿವವಂದನೆ ಮಾಡಿದ್ದೇವೆ. ನಾವು ಕೇಸರಿ ಧ್ವಜವನ್ನು ಹಾರಿಸಲು ಪ್ರಯತ್ನಿಸಿದೆವು, ಆದರೆ ಆಡಳಿತ ಮಂಡಳಿ ನಮ್ಮನ್ನು ತಡೆಯಿತು. ಈ ಜನರು ಎಲ್ಲೆಂದರಲ್ಲಿ ನಮಾಜ್ ಮಾಡುತ್ತಾರೆ. ನಂತರ ಅದನ್ನು ವಕ್ಫ್ ಆಸ್ತಿಯಾಗಿ ಸೇರಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು
ಈ ಸ್ಥಳ ಮರಾಠಾ ಸಾಮ್ರಾಜ್ಯದ ಸಂಕೇತವಾಗಿದೆ. ಹಾಗಾಗಿ ಅಲ್ಲಿ ನಮಾಜ್ ಮಾಡುವುದು ಪ್ರತಿಯೊಬ್ಬ ಪುಣೆ ನಿವಾಸಿಗೂ ಕಳವಳ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರದ ಸಚಿವ ನಿತೇಶ್ ರಾಣೆ ಕೂಡ ನಮಾಜ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಶನಿವಾರ್ ವಾಡಾ ನಮ್ಮ ಶೌರ್ಯದ ಸಂಕೇತವಾಗಿದೆ. ಹಿಂದೂಗಳು ಹಾಜಿ ಅಲಿಯಲ್ಲಿ ಹನುಮಾನ್ ಚಾಲೀಸಾ ಪಠಿಸಿದರೆ, ಅದು ಮುಸ್ಲಿಮರ ಭಾವನೆಗಳಿಗೆ ನೋವುಂಟು ಮಾಡುತ್ತದೆ. ಆದ್ದರಿಂದ, ಮಸೀದಿಯಲ್ಲಿ ಮಾತ್ರ ನಮಾಜ್ ಮಾಡಬೇಕು ಅಸಮಾಧಾನ ವ್ಯಕ್ತಪಡಿಸಿದರು.
ಗೋಮೂತ್ರದಿಂದ ಶುದ್ಧೀಕರಿಸುತ್ತಿದ್ದಂತೆ ಬಿಜೆಪಿ ಧಾರ್ಮಿಕ ದ್ವೇಷವನ್ನು ಹರಡುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದವು.