ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಮುಸ್ಲಿಮರು ಪರಿಸರಕ್ಕಾಗಿ ನದಿಗಳು ಮತ್ತು ಸೂರ್ಯನನ್ನು ಪೂಜಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ ದತ್ತಾತ್ರೇಯ ಹೊಸಬಾಳೆ ಹೇಳಿದರು.
ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು , ಭಾರತದಲ್ಲಿ ಮುಸ್ಲಿಮರಿಗೆ ಏನೂ ತೊಂದರೆಯಾಗುವುದಿಲ್ಲ. ನಮ್ಮ ಮುಸ್ಲಿಂ ಸಹೋದರರು ಸಹ ಸೂರ್ಯ ನಮಸ್ಕಾರ ಮಾಡಿದರೆ, ಅವರಿಗೆ ಏನೂ ಆಗಲ್ಲ. ಹಾಗೆ ಹೇಳಿದ ಮಾತ್ರಕ್ಕೆ ಅವರು ಮಸೀದಿಗೆ ಹೋಗುವುದನ್ನು ಯಾರೂ ತಡೆಯುವುದಿಲ್ಲ. ನಮ್ಮ ಹಿಂದು ಧರ್ಮ ಸರ್ವೋಚ್ಛ. ಅದು ಎಲ್ಲರ ಪರವಾಗಿದೆ ಎಂದು ಹೊಸಬಾಳೆ ತಿಳಿಸಿದ್ದಾರೆ.
ಯೋಗಾಸನಗಳ ಅನುಕ್ರಮವಾದ ಸೂರ್ಯ ನಮಸ್ಕಾರ ಮಾಡುವುದರಿಂದ ವೈಜ್ಞಾನಿಕವಾಗಿಯೂ ಆರೋಗ್ಯಕ್ಕೆ ಬಹಳ ಉತ್ತಮ ಅಭ್ಯಾಸವಾಗಿದೆ . ಇದರಿಂದ ಮುಸ್ಲಿಮರಿಗೆ ಏನು ಹಾನಿಯಾಗುತ್ತದೆ? ಪ್ರಾರ್ಥನೆ ಮಾಡುವವರು ಪ್ರಾಣಾಯಾಮ ಮಾಡಿದರೆ ತಪ್ಪೇ? ಹಾಗಂತ ನಮಾಜ್ ಬಿಟ್ಟುಬಿಡಿ ಎಂದು ನಾವು ಹೇಳುವುದಿಲ್ಲ ಎಂದು ಹೇಳಿದರು.
ಮಾನವ ಧರ್ಮಕ್ಕೆ ಆದ್ಯತೆ ನೀಡುವ ಮೂಲಕ ಯಾವುದೇ ನಂಬಿಕೆಯನ್ನು ಅನುಸರಿಸಲು ಜನರು ಸ್ವತಂತ್ರರು. ಹಿಂದು ತತ್ವಶಾಸ್ತ್ರವು ಎಲ್ಲಾ ಜೀವಿಗಳು ಮತ್ತು ಪ್ರಕೃತಿ ವಿಚಾರವಾಗಿ ಅಹಿಂಸೆಯನ್ನು ಬೋಧಿಸುತ್ತದೆ ಎಂದು ತಿಳಿಸಿದ್ದಾರೆ.
ದೇವತೆಗಳ ಹೆಸರಿನಲ್ಲಿ ಮಕ್ಕಳಿಗೆ ಹೆಸರು ಇಡುವುದು ಭಾರತದ ವಿಶಿಷ್ಟ ಪರಂಪರೆಯಾಗಿದೆ ಎಂಬುದನ್ನೂ ಅವರು ಒತ್ತಿ ಹೇಳಿದರು.

