Saturday, October 25, 2025

ನನ್ನ ಹೋರಾಟ ವ್ಯಕ್ತಿಗಳ ವಿರುದ್ಧವಲ್ಲ, ಕಲುಷಿತ ಮನಸ್ಸುಗಳ ವಿರುದ್ಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಗೆ ಬಂದಿರುವ ಬೆದರಿಕೆ ಕರೆಗಳ ವಿಡಿಯೋ ಸ್ಯಾಂಪಲ್ ಅನ್ನು ಬಿಡುಗಡೆ ಮಾಡಿದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ತಮ್ಮ ಬಳಿ 20 ಬೆದರಿಕೆ ಕರೆಗಳ ವಿಡಿಯೋಗಳಿವೆ ಎಂದು ಬಹಿರಂಗಪಡಿಸಿದ್ದಾರೆ. ಅವುಗಳಲ್ಲಿ ಕೆಲವು ಆಡಿಯೋಗಳು ಅಸಹ್ಯಕರವಾಗಿದ್ದು, ತಮ್ಮ ಮರ್ಯಾದೆ ಉಳಿಸಿಕೊಳ್ಳಲು ತಾವು ಎಲ್ಲ ವಿಡಿಯೋಗಳನ್ನು ಬಿಡುಗಡೆ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆದರಿಕೆ ಕರೆಗಳ ಬಗ್ಗೆ ಈ ಹಿಂದೆ ಪ್ರಸ್ತಾಪಿಸಿದ್ದಾಗ ಬಿಜೆಪಿ ನಾಯಕರು ‘ಇದು ಆರ್‌ಎಸ್‌ಎಸ್ ಸಂಸ್ಕೃತಿ ಅಲ್ಲ, ಪ್ರಿಯಾಂಕ್ ಖರ್ಗೆಯವರ ಪಬ್ಲಿಸಿಟಿ ಸ್ಟಂಟ್’ ಎಂದು ಟೀಕಿಸಿದ್ದರು ಎಂಬುದನ್ನು ನೆನಪಿಸಿದರು. ಆದರೆ, “ನಿನ್ನೆ ಬೆದರಿಕೆ ಕರೆ ಮಾಡಿದವನು ತಾನು ಆರ್‌ಎಸ್‌ಎಸ್‌ ನಿಂದ ಬಂದಿದ್ದೇನೆ, ಅದರ ಸಂಸ್ಕೃತಿ ಅಳವಡಿಸಿಕೊಂಡಿದ್ದೇನೆ ಎಂದಿದ್ದಾನೆ. ನೀವೇ ನೋಡಿದ್ದೀರಾ. ಬಿಜೆಪಿಯವರು ಆರ್‌ಎಸ್‌ಎಸ್ ಶಾಖೆಯಲ್ಲಿ ಏನು ಕಲಿಸುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ. ನೀವೇ ತೀರ್ಮಾನ ತೆಗೆದುಕೊಳ್ಳಿ” ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಆರ್ ಅಶೋಕ್ ಅವರು “ಈ ಕರೆಗೆ 2 ರೂಪಾಯಿ ಬೆಲೆ ಇಲ್ಲ” ಎಂದು ಹೇಳಿದ್ದನ್ನು ಪ್ರಸ್ತಾಪಿಸಿದ ಖರ್ಗೆ, ಈ ವಿಡಿಯೋವನ್ನು ತೋರಿಸಿ ಅವರಿಗೆ ಉತ್ತರ ಕೇಳಿ ಎಂದು ಮಾಧ್ಯಮಗಳಿಗೆ ಹೇಳಿದರು. ಆರ್‌ಎಸ್‌ಎಸ್‌ನ ಸಂಸ್ಕೃತಿ ಏನು ಎಂಬುದಕ್ಕೆ ತಾವು ಉತ್ತರ ನೀಡಬೇಕಿಲ್ಲ, ಏಕೆಂದರೆ ಹಾಲಿ ಮತ್ತು ಮಾಜಿ ಸಂಸದರು ಏನೆಲ್ಲಾ ಮಾತನಾಡಿದ್ದಾರೆ ಎಂಬುದರಲ್ಲೇ ಉತ್ತರ ಸಿಕ್ಕಿದೆ ಎಂದರು.

“ಇಂದು ಹಾಕಿರುವ ವಿಡಿಯೋ ಕೇವಲ ಸ್ಯಾಂಪಲ್. ಇದಕ್ಕಿಂತ ಅವಾಚ್ಯವಾಗಿ ಬೈದಿರುವ ವಿಡಿಯೋಗಳಿವೆ. ನನಗೆ ಹೇಸಿಗೆ ಬರುತ್ತದೆ. ನನ್ನ ಮರ್ಯಾದೆ ಉಳಿಸಿಕೊಳ್ಳಲು ನಾನು ಎಲ್ಲವನ್ನು ಹಾಕಿಲ್ಲ,” ಎಂದು ಪ್ರಿಯಾಂಕ್ ಖರ್ಗೆ ಪುನರುಚ್ಚರಿಸಿದರು.

ತಾವು ಕೂಡ ಐಟಿಬಿಟಿ ಸಚಿವರಾಗಿರುವುದರಿಂದ ತಂತ್ರಜ್ಞಾನದ ಬಗ್ಗೆ ಗೊತ್ತಿದೆ. ಕರೆ ಎಲ್ಲಿಂದ ಬರುತ್ತಿದೆ ಎಂಬುದು ತಮಗೂ ತಿಳಿದಿದೆ. ದೂರು ನೀಡುವ ಬಗ್ಗೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು.

ಅಂತಿಮವಾಗಿ, ತಮ್ಮ ಹೋರಾಟವು ವ್ಯಕ್ತಿಗಳ ಮೇಲಿನ ವೈಯಕ್ತಿಕ ಹೋರಾಟ ಅಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, “ನನ್ನ ಹೋರಾಟ ಆರ್‌ಎಸ್‌ಎಸ್ ತತ್ವ ಸಿದ್ಧಾಂತದ ವಿರುದ್ಧ ನಾನಿದ್ದೇನೆ,” ಎಂದು ಘೋಷಿಸಿದರು. ಫೋನ್ ಮಾಡಿದವನ ಮೇಲೆ ಕಿರುಕುಳವಾಗಬಹುದು ಅಷ್ಟೇ, ಆದರೆ ಅವನಲ್ಲಿ ಆಲೋಚನೆ ಹಾಕಿದ ವ್ಯಕ್ತಿಗಳು ಆರಾಮಾಗಿ ಓಡಾಡುತ್ತಾರೆ. ನನ್ನ ಹೋರಾಟ ಆ ನೂರು ವ್ಯಕ್ತಿಗಳ ಮನಸ್ಸು-ಬುದ್ಧಿಯನ್ನು ಕಲುಷಿತ ಮಾಡಿದವರ ವಿರುದ್ಧ ಎಂದರು. ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನೇ ಬಿಡದ ಈ ಸಿದ್ಧಾಂತ ತನ್ನನ್ನು ಬಿಡುತ್ತದೆಯೇ ಎಂದು ಪ್ರಶ್ನಿಸಿದ ಖರ್ಗೆ, ಈ ತತ್ವದ ವಿರುದ್ಧ ಹೋರಾಡುತ್ತಿರುವ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮತ್ತು ಸಿದ್ದರಾಮಯ್ಯ ಅವರ ಬೆಂಬಲ ತಮಗಿದೆ ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

error: Content is protected !!