ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಹಬ್ಬ ಮೈಸೂರು ದಸರಾ–2025ರ ಪ್ರವೇಶ ಟಿಕೆಟ್‌ಗಳು ಹಾಗೂ ಗೋಲ್ಡ್ ಕಾರ್ಡ್‌ಗಳನ್ನು ಸಾರ್ವಜನಿಕ ಬಳಕೆಗೆ ಜಿಲ್ಲಾಡಳಿತ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬಾರಿಯ ದಸರಾ ಹಬ್ಬವು ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಜರುಗಲಿದ್ದು, ಅರಮನೆ ಉತ್ಸವಗಳು, ಜಂಬೂಸವಾರಿ, ಪಂಜಿನ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಅನೇಕ ಆಕರ್ಷಣೆಗಳನ್ನು ಕಣ್ತುಂಬಿಕೊಳ್ಳಲು ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ಮತ್ತು ದಸರಾ ವಿಶೇಷಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಪ್ರಕಟಣೆ ನೀಡಿದ್ದು, ಗೋಲ್ಡ್ ಕಾರ್ಡ್‌ಗೆ 6,500 ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ಕಾರ್ಡ್ ಖರೀದಿಸಿದವರಿಗೆ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟದಲ್ಲಿ ವಿಶೇಷ ದರ್ಶನ ಹಾಗೂ ಮೈಸೂರು ಅರಮನೆಗೆ ಉಚಿತ ಪ್ರವೇಶ ದೊರೆಯಲಿದೆ. ಜೊತೆಗೆ ಜಂಬೂಸವಾರಿ, ಪಂಜಿನ ಕವಾಯತು, ಡ್ರೋನ್ ಶೋ ವೀಕ್ಷಣೆಗೆ ಪ್ರತ್ಯೇಕ ಆಸನ ವ್ಯವಸ್ಥೆಯೂ ಒದಗಿಸಲಾಗಿದೆ.
ಪ್ರಮುಖ ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ದರಗಳನ್ನು ಸಹ ಪ್ರಕಟಿಸಲಾಗಿದೆ. ಜಂಬೂಸವಾರಿಯ ಟಿಕೆಟ್‌ಗೆ 3,500 ರೂ., ಪಂಜಿನ ಕವಾಯತು ಟಿಕೆಟ್‌ಗೆ 1,500 ರೂ. ನಿಗದಿಯಾಗಿದೆ. ಎಲ್ಲಾ ಟಿಕೆಟ್‌ಗಳನ್ನು ಆನ್‌ಲೈನ್ ಮೂಲಕ https://mysoredasara.gov.in ಅಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3 ಗಂಟೆಯಿಂದಲೇ ಖರೀದಿಸಬಹುದಾಗಿದೆ.
ಆನ್‌ಲೈನ್‌ನಲ್ಲಿ ಖರೀದಿಸುವ ವಿಧಾನ ಸರಳವಾಗಿದ್ದು, ದಸರಾ ಜಾಲತಾಣಕ್ಕೆ ಭೇಟಿ ನೀಡಿ ‘ಟಿಕೆಟ್ ಬುಕ್ಕಿಂಗ್’ ಆಯ್ಕೆ ಮಾಡಿದ ಬಳಿಕ ಅಗತ್ಯ ಮಾಹಿತಿಯನ್ನು ತುಂಬಿ, ಪಾವತಿ ಮಾಡಿ ಟಿಕೆಟ್ ಪಡೆಯಬಹುದಾಗಿದೆ.
ಮೈಸೂರು ದಸರಾ ನಾಡಹಬ್ಬದ ಸಂಭ್ರಮವನ್ನು ಜನರು ನೇರವಾಗಿ ಅನುಭವಿಸಲು ಜಿಲ್ಲಾಡಳಿತ ಕೈಗೊಂಡಿರುವ ಈ ವ್ಯವಸ್ಥೆ, ಪ್ರವಾಸಿಗರು ಹಾಗೂ ದಸರಾ ಪ್ರೇಮಿಗಳಿಗೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಈ ಬಾರಿ ಗೋಲ್ಡ್ ಕಾರ್ಡ್ ಹಾಗೂ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯ ಮೂಲಕ ಹೆಚ್ಚಿನ ಜನರು ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.