ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಒಳಚರ್ಚೆಗಳು ಮುಂದುವರಿದಿರುವ ನಡುವೆಯೇ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ನಾಗ ಸಾಧುಗಳು ಭೇಟಿ ನೀಡಿರುವುದು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಹರಿದ್ವಾರ ಹಾಗೂ ಕಾಶಿಯಿಂದ ಆಗಮಿಸಿದ 20ಕ್ಕೂ ಹೆಚ್ಚು ನಾಗ ಸಾಧುಗಳು ಸದಾಶಿವನಗರದಲ್ಲಿರುವ ಡಿಕೆಶಿ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಆಶೀರ್ವಾದ ನೀಡಿದ್ದಾರೆ.
ಇತ್ತೀಚೆಗೆ ಕಾಶಿಯಲ್ಲಿ ನಾಗ ಸಾಧುಗಳು ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಆಶೀರ್ವಾದ ಮಾಡಿದ್ದ ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅದೇ ರೀತಿಯ ಭೇಟಿ ಬೆಂಗಳೂರಲ್ಲೂ ನಡೆದಿದ್ದು, ಸಹಜವಾಗಿಯೇ ಕುತೂಹಲ ಮೂಡಿಸಿದೆ. ಆಶೀರ್ವಾದ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ, ಧಾರ್ಮಿಕವಾಗಿ ಬಂದವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವುದು ತಪ್ಪೇನಲ್ಲ ಎಂದು ಸ್ಪಷ್ಟಪಡಿಸಿದರು. ಮನೆಗೆ ಯಾರೇ ಬಂದರೂ ಗೌರವದಿಂದ ಸ್ವಾಗತಿಸುವುದು ನಮ್ಮ ಸಂಸ್ಕೃತಿ ಎಂದರು.
ಈ ನಡುವೆ ತಮ್ಮ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮಂಗಳವಾರ ದೆಹಲಿಗೆ ತೆರಳಿ ಜಲಮಂಡಲಿ ಸಂಬಂಧಿತ ಕೆಲಸಗಳು ಹಾಗೂ ಮೇಕೆದಾಟು ಯೋಜನೆ ಕುರಿತ ಚರ್ಚೆ ನಡೆಸುವುದಾಗಿ ತಿಳಿಸಿದರು. ಹೈಕಮಾಂಡ್ ಭೇಟಿ ವಿಚಾರದಲ್ಲೂ ಯಾವುದೇ ರಹಸ್ಯವಿಲ್ಲ ಎಂದು ಹೇಳಿದರು.

