ಹೊಸದಿಗಂತ ವರದಿ ಕಲಬುರಗಿ:
ಜಿಲ್ಲೆಯ ಚಿತ್ತಾಪುರ ಪಟ್ಟಣದ ನಾಗಾವಿ ಯಲ್ಲಮ್ಮ ದೇವಾಲಯದಲ್ಲಿ ಕಳೆದ ಎಂಟು ತಿಂಗಳಲ್ಲಿ ದೇವಸ್ಥಾನದ ಹುಂಡಿ ಸಂಗ್ರಹವಾಗಿ ಒಟ್ಟು ₹14,73,160 ರೂ. ಹಣ ಲಭಿಸಿದೆ.
ರಾಷ್ಟ್ರಕೂಟರ ಕುಲದೇವತೆಯಾಗಿ ಪ್ರಸಿದ್ಧಿ ಪಡೆದಿರುವ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ ದೇವಾಲಯದ ಆವರಣದಲ್ಲಿ ಸ್ವಯಂಸೇವಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ಸಮ್ಮುಖದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಈ ವೇಳೆ ನಗದು ರೂಪದಲ್ಲಿ ₹14.73 ಲಕ್ಷ ಹಣ ಸಂಗ್ರಹವಾಗಿರುವುದು ದೃಢಪಟ್ಟಿದೆ.
ಹುಂಡಿಯಲ್ಲಿ ಭಾರತೀಯ ನೋಟುಗಳ ಜೊತೆಗೆ ವಿದೇಶಿ ಕರೆನ್ಸಿಯೂ ಪತ್ತೆಯಾಗಿದ್ದು, ಮಲೇಷ್ಯಾ ದೇಶದ 18 ನೋಟುಗಳು ಮತ್ತು 2 ನಾಣ್ಯಗಳು ದೊರೆತಿವೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ತಹಶೀಲ್ದಾರ್ ನಾಗಯ್ಯ ಹಿರೇಮಠ ಮಾಹಿತಿ ನೀಡಿದ್ದಾರೆ.
ಭಕ್ತರ ನಿರಂತರ ಆಗಮನ ಮತ್ತು ದೇವಿಯ ಮೇಲಿನ ಅಪಾರ ಭಕ್ತಿಭಾವದಿಂದ ಈ ಪ್ರಮಾಣದ ಹಣ ಸಂಗ್ರಹವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.



