ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಟಿಯಾಂಜಿನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ಸಿಕ್ಕಿದ್ದು, ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.
ಇದೇ ಸಮಯದಲ್ಲಿ ಪ್ರಧಾನಿ ಮೋದಿ ರಷ್ಯಾ ಅಧ್ಯಕ್ಷ ಪುಟಿನ್‌ರನ್ನೂ ಭೇಟಿಯಾಗಲಿದ್ದಾರೆ. ಈ ಸಮಯದಲ್ಲಿ ಪ್ರಧಾನಿ ಮೋದಿ ಕೆಲವು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ನಿರೀಕ್ಷೆಯಿದೆ.
ಇತ್ತ ಪುಟಿನ್ ಭೇಟಿಗೂ ಮುನ್ನವೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನ್ನಾಡಿದ್ದಾರೆ. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ಎಲ್ಲಾ ಸಂಭಾವ್ಯ ಬೆಂಬಲ ನೀಡುವ ಭರವಸೆಯನ್ನು ಝೆಲೆನ್ಸ್ಕಿಗೆ ನೀಡಿದ್ದಾರೆ.
ಮಾತುಕತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮೋದಿ, ದೂರವಾಣಿ ಕರೆ ಮಾಡಿದ್ದಕ್ಕಾಗಿ ಅಧ್ಯಕ್ಷ ಝೆಲೆನ್ಸ್ಕಿಗೆ ಧನ್ಯವಾದಗಳು. ಉಕ್ರೇನ್ನಲ್ಲಿ ನಡೆಯುತ್ತಿರುವ ಸಂಘರ್ಷ, ಮಾನವೀಯ ಅಂಶ, ಶಾಂತಿ ಮತ್ತು ಸ್ಥಿರತೆ ಪುನಃಸ್ಥಾಪಿಸುವ ಪ್ರಯತ್ನಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಈ ದಿಕ್ಕಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸಲಿದೆ ಎಂದಿದ್ದಾರೆ.