ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಳು ವರ್ಷಗಳ ಬಳಿಕ ಶನಿವಾರ ಚೀನಾಕ್ಕೆ ಆಗಮಿಸಿದ್ದಾರೆ. ಶಾಂಘೈ ಸಹಕಾರ ಸಂಸ್ಥೆಯ ಶೃಂಗಸಭೆಯಲ್ಲಿ ಭಾಗವಹಿಸಲು ನರೇಂದ್ರ ಮೋದಿ ಶನಿವಾರ (ಆಗಸ್ಟ್ 30) ಚೀನಾದ ಬಂದರು ನಗರಿ ಟಿಯಾಂಜಿನ್‌ಗೆ ಆಗಮಿಸಿದರು.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಗಳಿಂದ ಉಂಟಾದ ಭಾರತ – ಅಮೆರಿಕ ಸಂಬಂಧಗಳಲ್ಲಿನ ಹಠಾತ್ ಕುಸಿತದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ.

ವಾಷಿಂಗ್ಟನ್‌ನ ಸುಂಕ ವಿವಾದವು ಪ್ರಪಂಚದಾದ್ಯಂತದ ಬಹುತೇಕ ಎಲ್ಲಾ ಪ್ರಮುಖ ಆರ್ಥಿಕತೆಗಳ ಮೇಲೆ ಪರಿಣಾಮ ಬೀರಿದೆ.ಈ ಹಿನ್ನೆಲೆಯಲ್ಲಿ ಭಾನುವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿನ ಪ್ರಧಾನಿ ಮೋದಿ ಅವರ ಸಭೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಮೋದಿ ಮತ್ತು ಕ್ಸಿ ಅವರು ಭಾರತ – ಚೀನಾ ಆರ್ಥಿಕ ಸಂಬಂಧಗಳನ್ನು ಪರಾಮರ್ಶಿಸುವ ಮತ್ತು ಪೂರ್ವ ಲಡಾಖ್‌ನಲ್ಲಿ ಗಡಿ ವಿವಾದದ ನಂತರ ಬಿಕ್ಕಟ್ಟಿಗೆ ಸಿಲುಕಿದ ಸಂಬಂಧಗಳನ್ನು ಮತ್ತಷ್ಟು ಸಾಮಾನ್ಯ ಸ್ಥಿತಿಗೆ ತರುವ ಕ್ರಮಗಳ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ.

ಟಿಯಾಂಜಿನ್ ಏರ್ಪೋರ್ಟ್ನಲ್ಲಿ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದ್ದು, ಚೀನಾ ಸಚಿವ ಲೀ ಲೆಚೆಂಗ್ ಬರಮಾಡಿಕೊಂಡರು. ಚೀನಾದಲ್ಲಿರುವ ಭಾರತೀಯರು ತ್ರಿವರ್ಣ ಧ್ವಜವನ್ನು ಬೀಸುತ್ತಾ, ಭಾರತ್ ಮಾತಾ ಕಿ ಜೈ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.
ಇನ್ನು ಪ್ರಧಾನಿ ಮೋದಿ ಅವರಿಗೆ ಹೋಟೆಲ್ ಆವರಣದಲ್ಲಿ ಚೀನೀ ಕಲಾವಿದರಿಂದ ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಮೂಲಕ ಸ್ವಾಗತ ನೀಡಲಾಯಿತು. ಪ್ರಧಾನಿ ಮೋದಿ ಅವರು ಚೀನೀ ಕಲಾವಿದರ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಪ್ರದರ್ಶನಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ಪ್ರಧಾನಿ ಮೋದಿ ಅವರ ಮುಂದೆ “ವಂದೇ ಮಾತರಂ” ಗೀತೆಯನ್ನು ನುಡಿಸಿದ ಚೀನೀ ಕಲಾವಿದರು ಮಾತನಾಡಿ, “ಇದು ತುಂಬಾ ರೋಮಾಂಚನಕಾರಿಯಾಗಿತ್ತು. ಪ್ರಧಾನಿ ಮೋದಿ ಅವರು ನಮ್ಮ ಶಾಸ್ತ್ರೀಯ ಸಂಗೀತವನ್ನು ಇಷ್ಟಪಟ್ಟಿದ್ದಾರೆ ಎಂದು ನಾವು ಭಾವಿಸುತ್ತೇವೆ. ಅವರು ತುಂಬಾ ಒಳ್ಳೆಯ ವ್ಯಕ್ತಿ” ಎಂದು ಸಂತಸ ವ್ಯಕ್ತಪಡಿಸಿದರು.

2018ರ ನಂತರ ಮೊದಲ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಚೀನಾಗೆ ತೆರಳಿದ್ದಾರೆ. ಲಡಾಕ್‌ನ ಘಲ್ವಾನ್ ಕಣಿವೆಯಲ್ಲಿನ ಘರ್ಷಣೆಯ ನಂತರ 2020ರಲ್ಲಿ ಹದಗೆಟ್ಟಿದ್ದ ಭಾರತ-ಚೀನಾ ಸಂಬಂಧ ಮತ್ತೆ ಸುಧಾರಿಸುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವಿನ ಭೇಟಿಯ ಮೇಲೆ ವಿಶ್ವದ ಕಣ್ಣು ನೆಟ್ಟಿದೆ.