ಇಂದಿನ ಯುಗದಲ್ಲಿ ಇಂಧನವೇ ಅಭಿವೃದ್ಧಿಯ ಕೀಲಿಕೈ ಎಂದರು ತಪ್ಪಾಗಲಾರದು. ಆದರೆ ಇಂಧನ ಸಂಪನ್ಮೂಲಗಳು ಸೀಮಿತವಾಗಿರುವುದರಿಂದ ಅವುಗಳನ್ನು ಜವಾಬ್ದಾರಿಯಿಂದ ಬಳಸುವ ಅಗತ್ಯ ದಿನೇದಿನೇ ಹೆಚ್ಚುತ್ತಿದೆ. ಇದೇ ಅರಿವು ಜನಸಾಮಾನ್ಯರಲ್ಲಿ ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 14ರಂದು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಇತಿಹಾಸ:
ಭಾರತ ಸರ್ಕಾರವು 2001ರಲ್ಲಿ ಇಂಧನ ಸಂರಕ್ಷಣಾ ಕಾಯ್ದೆ (Energy Conservation Act, 2001)ಯನ್ನು ಜಾರಿಗೆ ತಂದಿತು. ಈ ಕಾಯ್ದೆಯ ಅಡಿಯಲ್ಲಿ ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (BEE) ಸ್ಥಾಪನೆಯಾಯಿತು. ಇಂಧನದ ಪರಿಣಾಮಕಾರಿ ಬಳಕೆ, ವ್ಯರ್ಥ ತಡೆ ಮತ್ತು ಸಾರ್ವಜನಿಕ ಜಾಗೃತಿಗಾಗಿ ಡಿಸೆಂಬರ್ 14ನ್ನು ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನವಾಗಿ ಘೋಷಿಸಲಾಯಿತು. ಆ ದಿನದಿಂದಲೇ ಶಾಲೆಗಳು, ಕಾಲೇಜುಗಳು, ಕೈಗಾರಿಕೆಗಳು ಮತ್ತು ಸರ್ಕಾರಿ ಸಂಸ್ಥೆಗಳು ಇಂಧನ ಸಂರಕ್ಷಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಡೆಸುತ್ತಿವೆ.
ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನದ ಮಹತ್ವ
ಈ ದಿನದ ಮುಖ್ಯ ಉದ್ದೇಶ ಇಂಧನ ವ್ಯರ್ಥವನ್ನು ಕಡಿಮೆ ಮಾಡುವುದು ಮತ್ತು ಸ್ಥಿರ ಅಭಿವೃದ್ಧಿಯ ಬಗ್ಗೆ ಜಾಗೃತಿ ಮೂಡಿಸುವುದು. ಇಂಧನ ಸಂರಕ್ಷಣೆ ಮೂಲಕ ಪರಿಸರ ಮಾಲಿನ್ಯ ಕಡಿಮೆಯಾಗುತ್ತದೆ, ಕಾರ್ಬನ್ ಮಾಲಿನ್ಯ ನಿಯಂತ್ರಣಕ್ಕೆ ಬರುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ಸಂಪನ್ಮೂಲಗಳನ್ನು ಉಳಿಸಬಹುದು. ಮನೆಗಳಲ್ಲಿ ವಿದ್ಯುತ್ ಉಳಿಸುವುದು, ನವೀಕರಿಸಬಹುದಾದ ಇಂಧನ ಬಳಕೆ, ಇಂಧನ ಕ್ಷಮ ಸಾಧನಗಳ ಉಪಯೋಗ ಇವುಗಳ ಬಗ್ಗೆ ಜನರನ್ನು ಪ್ರೇರೇಪಿಸುವುದೇ ಈ ದಿನದ ಮುಖ್ಯ ಅಂಶವಾಗಿದೆ.

