Friday, October 31, 2025

ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕಕ್ಕೆ ಧಕ್ಕೆ: ಲಾಲ್‌ಬಾಗ್ ಸುರಂಗ ಯೋಜನೆಗೆ ತೇಜಸ್ವಿ ಸೂರ್ಯ ತೀವ್ರ ವಿರೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರಸ್ತಾವಿತ ಸುರಂಗ ರಸ್ತೆ ನಿರ್ಮಾಣ ಯೋಜನೆಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ನಗರ ಅಭಿವೃದ್ಧಿ ಇಲಾಖೆಯ ತಜ್ಞರ ಸಮಿತಿಯೇ ಯೋಜನೆಯ ಡಿಪಿಆರ್ ಸರಿಯಿಲ್ಲ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ. 20 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಕೇವಲ ಶೇಕಡ 10ರಷ್ಟು ಕಾರು ಮಾಲೀಕರಿಗೆ ಪ್ರಯೋಜನಕಾರಿಯಾಗಿದ್ದು, ಶೇಕಡ 90ರಷ್ಟು ಸಾರ್ವಜನಿಕ ಸಾರಿಗೆ ಬಳಕೆದಾರರನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿದ್ದಾರೆ.

ಇಲ್ಲಿರುವ ಮೂರು ಸಾವಿರ ಮಿಲಿಯನ್ ವರ್ಷ ಹಳೆಯ ಬಂಡೆಯು ರಾಷ್ಟ್ರೀಯ ಭೂವೈಜ್ಞಾನಿಕ ಸ್ಮಾರಕವಾಗಿದ್ದು, ಇದನ್ನು ನಾಶಪಡಿಸಲು ಮುಂದಾಗಿರುವುದನ್ನು ಖಂಡಿಸಿದ್ದಾರೆ. ಯಾವುದೇ ವೈಜ್ಞಾನಿಕ ಅಧ್ಯಯನ ಮತ್ತು ಪರಿಣಾಮದ ಕುರಿತಾದ ವಿಶ್ಲೇಷಣೆ ಇಲ್ಲದೆ ಯೋಜನೆ ಕೈಗೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮೆಟ್ರೋ ಮಾರ್ಗವಿದ್ದರೂ ಸುರಂಗ ರಸ್ತೆ ಅಗತ್ಯವಿಲ್ಲ ಎಂದಿರುವ ಅವರು ಲಾಲ್ ಬಾಗ್ ನ ಒಂದಿಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

error: Content is protected !!