ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಕೈಗಾರಿಕಾ ಒಕ್ಕೂಟ ನವದೆಹಲಿಯಲ್ಲಿ ಆಯೋಜಿಸಿದ್ದ ‘ಇಂಡಸ್ಟ್ರಿ-ಅಕಾಡೆಮಿ ಪಾಲುದಾರಿಕೆ 2025’ ಜಾಗತಿಕ ಶೃಂಗಸಭೆಯಲ್ಲಿ ಬೆಂಗಳೂರು ಮೂಲದ ಪ್ರಮುಖ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಸಂಸ್ಥೆಯಾದ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ (ಐ) ಪ್ರೈವೇಟ್ ಲಿಮಿಟೆಡ್ ಅತ್ಯುನ್ನತ ‘ಡೈಮಂಡ್ ಅವಾರ್ಡ್’ ಮುಡಿಗೇರಿಸಿಕೊಂಡಿದೆ.

ನವದೆಹಲಿಯ ಇಂಡಿಯನ್ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ ಸಚಿವರಾದ ಶ್ರೀ ಜಿತೇಂದ್ರ ಸಿಂಗ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕೈಗಾರಿಕೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ಮತ್ತು ತಾಂತ್ರಿಕ ನಾವೀನ್ಯತೆಯನ್ನು ಉತ್ತೇಜಿಸುವಲ್ಲಿ ಸಂಸ್ಥೆಯು ತೋರಿದ ಅಪ್ರತಿಮ ಸಾಧನೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಶಂಕರ್ ಎಲೆಕ್ಟ್ರಿಕಲ್ಸ್‌ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜೇಶ್ ಶೆಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆಯು ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಪುಣೆ ಸೇರಿದಂತೆ ದೇಶದಾದ್ಯಂತ 1,500ಕ್ಕೂ ಹೆಚ್ಚು ಬೃಹತ್ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಕಳೆದ 27 ವರ್ಷಗಳಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಶಂಕರ್ ಎಲೆಕ್ಟ್ರಿಕಲ್ಸ್, ಎಂಎಸ್ಎಂಇ ವಿಭಾಗದಲ್ಲಿ ಈ ಸಾಧನೆ ಮಾಡಿದೆ. ದೇಶದ ಪ್ರತಿಷ್ಠಿತ ಯೋಜನೆಗಳಾದ ಅಯೋಧ್ಯೆ ಶ್ರೀರಾಮ ಮಂದಿರ, ಮೈಕ್ರಾನ್ ಡೇಟಾ ಸೆಂಟರ್ ಮತ್ತು ಎನ್‌ಪಿಸಿಐ ನಂತಹ ಪ್ರಮುಖ ಕೇಂದ್ರಗಳ ವಿದ್ಯುದ್ದೀಕರಣ ಕಾರ್ಯದಲ್ಲಿ ಸಂಸ್ಥೆಯು ಮಹತ್ವದ ಪಾತ್ರ ವಹಿಸಿದೆ.

ಸಿಐಐ ಇಂಡಸ್ಟ್ರಿ-ಅಕಾಡೆಮಿ ಪಾಲುದಾರಿಕೆ ಪ್ರಶಸ್ತಿಯು ಭಾರತವನ್ನು ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಶಕ್ತಿಕೇಂದ್ರವನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಶಂಕರ್ ಎಲೆಕ್ಟ್ರಿಕಲ್ಸ್ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಮತ್ತು ಸುಸ್ಥಿರ ಇಂಧನ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

