ಬೆಳಗಿನ ಜಾವದ ಶುದ್ಧ ಗಾಳಿ ಮಾಯವಾಗಿ, ನೀಲಿ ಆಕಾಶ ಮಸುಕಾಗಿ ಕಾಣುವಂತಹ ದಿನಗಳು ಇಂದು ಸಾಮಾನ್ಯವಾಗಿವೆ. ವಾಹನಗಳ ಹೊಗೆ, ಕಾರ್ಖಾನೆಗಳ ತ್ಯಾಜ್ಯ, ಪ್ಲಾಸ್ಟಿಕ್ ಕಸದ ರಾಶಿ ಇವೆಲ್ಲವೂ ಮೌನವಾಗಿ ನಮ್ಮ ಜೀವ ಹಿಂಡುತ್ತಿವೆ. ಈ ಆತಂಕಕಾರಿ ಸ್ಥಿತಿಯಿಂದ ಜನರನ್ನು ಎಚ್ಚರಗೊಳಿಸಲು, ಪ್ರಕೃತಿಯೊಂದಿಗೆ ನಾವು ಹೊಂದಬೇಕಾದ ಜವಾಬ್ದಾರಿಯನ್ನು ನೆನಪುಮಾಡೋಕೆ ಪ್ರತಿವರ್ಷ ಡಿಸೆಂಬರ್ 2ರಂದು “ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ”ವನ್ನು ಆಚರಿಸಲಾಗುತ್ತದೆ. ಇದು ಕೇವಲ ಒಂದು ದಿನದ ಆಚರಣೆ ಅಲ್ಲ; ಮಾನವ ಮತ್ತು ಪ್ರಕೃತಿಯ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳುವ ಸಂಕಲ್ಪದ ದಿನವೂ ಹೌದು.
ಈ ದಿನದ ಆಚರಣೆಗೆ ಹಿನ್ನೆಲೆ ಆಗಿರುವುದು 1984ರ ಭೋಪಾಲ್ ಅನಿಲ ದುರಂತ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಭೀಕರ ರಾಸಾಯನಿಕ ದುರಂತವು ಸಾವಿರಾರು ಜನರ ಜೀವವನ್ನು ಕಿತ್ತುಕೊಂಡು, ಲಕ್ಷಾಂತರ ಜನರ ಆರೋಗ್ಯಕ್ಕೆ ಶಾಶ್ವತ ಹಾನಿ ಉಂಟುಮಾಡಿತು. ಆ ದುರಂತದಿಂದ ಪಾಠ ಕಲಿಯುವ ಉದ್ದೇಶದಿಂದ ಭಾರತ ಸರ್ಕಾರವು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು ಘೋಷಿಸಿದ್ದು, ಕೈಗಾರಿಕೆಗಳು ಹಾಗೂ ನಾಗರಿಕರಲ್ಲಿ ಪರಿಸರ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶ ಹೊಂದಿದೆ.
ವಾಯು, ಜಲ ಮತ್ತು ಭೂ ಮಾಲಿನ್ಯವು ಮಾನವನ ಜೀವನ, ಆರೋಗ್ಯ ಮತ್ತು ಪ್ರಕೃತಿಯ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಅತಿಯಾದ ಕಾರ್ಬನ್ ಉತ್ಪಾದನೆ, ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಬಳಕೆ ಹಾಗೂ ರಸಾಯನಿಕ ಮಿಶ್ರಿತ ನೀರು ಇಂದು ಭೂಮಿಗೆ ದೊಡ್ಡ ಅಪಾಯವಾಗಿ ಪರಿಣಮಿಸಿದೆ. ಇದರಿಂದ ಹವಾಮಾನ ಬದಲಾವಣೆ, ಶುದ್ಧ ಕುಡಿಯುವ ನೀರಿನ ಕೊರತೆ ಮತ್ತು ಅನೇಕ ರೋಗಗಳು ಹೆಚ್ಚಾಗುತ್ತಿವೆ.
ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಮುಖ್ಯ ಗುರಿಯೇ ಪರಿಸರ ಮಾಲಿನ್ಯವನ್ನು ನಿಯಂತ್ರಿಸುವುದು, ಕೈಗಾರಿಕೆಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯಗೊಳಿಸುವುದು, ಶುದ್ಧ ತಂತ್ರಜ್ಞಾನ ಬಳಕೆಯನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕರಲ್ಲಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಬೆಳೆಸುವುದಾಗಿದೆ.
ಮಾಲಿನ್ಯ ನಿಯಂತ್ರಣ ದಿನದ ಮೂಲಕ ಮೂಡುವ ಜಾಗೃತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಪ್ರತಿಯೊಬ್ಬರೂ ದಿನನಿತ್ಯದಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು, ನೀರು–ವಿದ್ಯುತ್ ಉಳಿಸುವುದು, ಸಾರ್ವಜನಿಕ ಸಾರಿಗೆಯನ್ನು ಬಳಸುವುದು ಮತ್ತು ಹಸಿರು ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಾವಶ್ಯಕ. ಪರಿಸರವನ್ನು ಕಾಪಾಡಿದರೆ ಮಾತ್ರ ಮಾನವಕುಲದ ಭವಿಷ್ಯ ಸುರಕ್ಷಿತವಾಗಿರುತ್ತದೆ ಎಂಬ ಸಂದೇಶವೇ ಈ ದಿನದ ಮರ್ಮ.

