ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಎನ್‌ಸಿಬಿ ಅಧಿಕಾರಿಗಳು ಜಪ್ತಿ ಮಾಡಿರುವ ಘಟನೆ ನಡೆದಿದೆ.
ಕಾರ್ಯಾಚರಣೆ ವೇಳೆ ಮೂವರು ಆರೋಪಿಗಳನ್ನ ಎನ್‌ಸಿಬಿ ಬಂಧಿಸಿದೆ. ಬಂಧಿತರಿಂದ ಒಟ್ಟು 45 ಕೆ ಜಿ ಹೈಡ್ರೋಗಾಂಜಾ, 6 ಕೆಜಿ ಸೈಲೋಸಿಬಿನ್ ಅಣಬೆಯನ್ನ ಜಪ್ತಿ ಮಾಡಲಾಗಿದೆ.
ಮೊದಲಿಗೆ ಥೈಲ್ಯಾಂಡ್‌ನಿಂದ ಡ್ರಗ್ಸ್ ಸಾಗಾಟ ಮಾಡುತ್ತಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಅಧಿಕಾರಿಗಳು ಕೊಲಂಬೋದಿಂದ ಬರ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಂಧಿತರಿಂದ 31 ಕೆಜಿ ಹೈಡ್ರೋಗಾಂಜಾ, 4 ಕೆಜಿ ಸೈಲೋಸಿಬಿನ್ ಅಣಬೆ ಜಪ್ತಿ ಮಾಡಿದ್ದರು. ಇವರಿಬ್ಬರ ವಿಚಾರಣೆ ವೇಳೆ ಮುಂದಿನ ಫ್ಲೈಟ್‌ನಲ್ಲಿ ಹ್ಯಾಂಡ್ಲರ್ ಶ್ರೀಲಂಕಾದಿಂದ ಬರುವ ಮಾಹಿತಿ ಸಿಕ್ಕಿತ್ತು. ಅದರಂತೆ ಕಾದು ಕುಳಿತಿದ್ದ ಅಧಿಕಾರಿಗಳು ಶ್ರೀಲಂಕಾದ ಪ್ರಜೆಯನ್ನೂ ಬಂಧಿಸಿ, ಆತನ ಬಳಿಯಿದ್ದ 14 ಕೆ ಜಿ ಹೈಡ್ರೋಗಾಂಜಾ, 2 ಕೆಜಿ ಅಣಬೆಯನ್ನು ಜಪ್ತಿ ಮಾಡಿದರು.