ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಕೋಲಾರ ಗೋಲ್ಡ್ ಫೀಲ್ಡ್ ಪುನಾರಂಭಕ್ಕೆ ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲೇ ಇದೀಗ ದೇಶದಲ್ಲಿ ಮತ್ತೊಂದು ಕೆಜಿಎಫ್ ಪತ್ತೆಯಾಗಿದೆ. ಆದರೆ ಇದು ಕರ್ನಾಟಕವಲ್ಲ!
ಕರ್ನಾಟಕದ ಕೆಜಿಎಫ್ ಮಾದರಿಯಲ್ಲೇ ನೆರೆಯ ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಕದಿರಿಯಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಕೆಜಿಎಫ್ ಮಾದರಿಯಲ್ಲಿ ಗಣಿಗಾರಿಕೆ ಇಲ್ಲಿ ಸಾಧ್ಯ ಎಂದು ಸಮೀಕ್ಷೆಗಳು ಸೂಚಿಸಿದ ಬೆನ್ನಲ್ಲೇ ಕದಿರಿಯಲ್ಲಿ ಸರ್ಕಾರ ವಾಯು ಸಮೀಕ್ಷೆಯಲ್ಲಿ ತೊಡಗಿದೆ.
ಮೂಲಗಳ ಪ್ರಕಾರ ಕೇಂದ್ರ ಸರ್ಕಾರ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಬೃಹತ್ ಚಿನ್ನದ ನಿಕ್ಷೇಪಗಳು ಬಹಿರಂಗಗೊಂಡಿರುವುದರಿಂದ, ಹಿಂದಿನ ಅನಂತಪುರ ಜಿಲ್ಲೆಯ ಕದಿರಿ ಪ್ರದೇಶವು ಈಗ ದೇಶಾದ್ಯಂತ ಗಮನ ಸೆಳೆಯುತ್ತಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಪ್ರದೇಶವು ಭಾರತೀಯ ಗಣಿಗಾರಿಕೆಯ ಇತಿಹಾಸದಲ್ಲಿ ಪ್ರಸಿದ್ಧ ‘ಕೋಲಾರ ಗೋಲ್ಡ್ ಫೀಲ್ಡ್’ ಮಾದರಿಯಲ್ಲಿ ನಿಲ್ಲಲಿದೆ ಎಂಬ ಮಾತುಗಳು ಹರಿದಾಡುತ್ತಿದ್ದು, ಇದು ಸ್ಥಳೀಯರಲ್ಲಿ ಆಸಕ್ತಿ ಹೆಚ್ಚಾಗಿದೆ.
ಅದೇ ರೀತಿ, ರಾಮಗಿರಿ ಪ್ರದೇಶದಲ್ಲಿ ಸುಮಾರು ನಾಲ್ಕು ಟನ್ ಮತ್ತು ಬೊಕ್ಸಂಪಲ್ಲಿ ಪ್ರದೇಶದಲ್ಲಿ ಎರಡು ಟನ್ ಚಿನ್ನದ ನಿಕ್ಷೇಪಗಳಿವೆ ಎಂದು ಅಂದಾಜಿಸಲಾಗಿದೆ. ಈ ಪ್ರದೇಶದಲ್ಲಿ ಒಟ್ಟು ಸುಮಾರು 16 ಟನ್ ಚಿನ್ನದ ನಿಕ್ಷೇಪಗಳಿವೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತವೆ. ಈ ಚಿನ್ನದ ನಿಕ್ಷೇಪಗಳು ಸರಿಸುಮಾರು 97.4 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿಕೊಂಡಿವೆ ಎಂದು ಸಮೀಕ್ಷೆಯು ಬಹಿರಂಗಪಡಿಸಿದೆ.
ಪ್ರತಿ 50 ಮೀಟರ್ ಆಳದಲ್ಲಿ ಚಿನ್ನದ ನಿಕ್ಷೇಪಗಳನ್ನು ಗುರುತಿಸಲಾಗಿದೆ. ಮಾತ್ರವಲ್ಲದೆ, ಒಂದು ಟನ್ ಮಣ್ಣಿನಲ್ಲಿ ಸರಾಸರಿ ನಾಲ್ಕು ಗ್ರಾಂ ಚಿನ್ನವಿದೆ ಎಂದು ನಿರ್ಧರಿಸಲಾಗಿದೆ. ಇದು ಗಣಿಗಾರಿಕೆಗೆ ಅನುಕೂಲಕರವಾಗಿದೆ ಮತ್ತು ಆರ್ಥಿಕವಾಗಿ ಲಾಭದಾಯಕ ಯೋಜನೆಯಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಜ್ಞರು ನಂಬಿದ್ದಾರೆ.
ರಸ್ತೆಗಳು, ವಿದ್ಯುತ್ ಮತ್ತು ನೀರಿನ ಸೌಲಭ್ಯಗಳ ಸುಧಾರಣೆಯ ಜೊತೆಗೆ, ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸುವ ಸಾಧ್ಯತೆಯಿದೆ. ಸ್ಥಳೀಯ ಯುವಕರಿಗೆ ಗಣಿಗಾರಿಕೆ ಕ್ಷೇತ್ರದಲ್ಲಿ ತರಬೇತಿ ಮತ್ತು ಉದ್ಯೋಗಾವಕಾಶಗಳಿಗೆ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ.




