ಕನ್ನಡಿಗರ ಸಂಪ್ರದಾಯಿಕ ಊಟದಲ್ಲಿ ಕೋಸಂಬರಿಗೆ ವಿಶೇಷ ಸ್ಥಾನವಿದೆ. ಹಬ್ಬ-ಹರಿದಿನ, ಮದುವೆ ಹಾಗೂ ವಿಶೇಷ ಸಂದರ್ಭಗಳಲ್ಲಿ ಬಾಳೆ ಎಲೆಯಲ್ಲಿ ಬಡಿಸಲ್ಪಡುವ ಅತಿಥಿ ತಿನಿಸು ಇದಾಗಿದೆ. ಇದು ಆರೋಗ್ಯಕರವಾಗಿರುವುದರ ಜೊತೆಗೆ ತಯಾರಿಸಲು ಕೂಡ ತುಂಬಾ ಸುಲಭ. ಬೇಳೆ, ತರಕಾರಿಗಳಿಂದ ಕೂಡಿದ ಕೋಸಂಬರಿ ಪೋಷಕಾಂಶಗಳ ಖಜಾನೆ ಎನ್ನಬಹುದು.
ಬೇಕಾಗುವ ಸಾಮಗ್ರಿಗಳು:
ಹೆಸರುಬೇಳೆ – ½ ಕಪ್ (2-3 ಗಂಟೆ ನೀರಿನಲ್ಲಿ ನೆನೆಸಿದದ್ದು)
ಸೌತೆಕಾಯಿ – 1
ಕ್ಯಾರಟ್ – 1 (ತುರಿದದ್ದು)
ಹಸಿಮೆಣಸು – 1-2 (ಸಣ್ಣದಾಗಿ ಕತ್ತರಿಸಿದದ್ದು)
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್ (ಚೂರು ಮಾಡಿದದ್ದು)
ತುರಿ ತೆಂಗಿನ ಕಾಯಿ – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಲಿಂಬೆರಸ – 1 ಟೀ ಸ್ಪೂನ್
ಒಗ್ಗರಣೆಗಾಗಿ:
ಎಣ್ಣೆ – 1 ಟೀ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಕರಿಬೇವು – 6-7 ಎಲೆ
ಹಿಂಗು – ಚಿಟಿಕೆ
ತಯಾರಿಸುವ ವಿಧಾನ:
ಮೊದಲು ನೆನೆಸಿದ ಹೆಸರುಬೇಳೆಯನ್ನು ಚೆನ್ನಾಗಿ ಸೋಸಿಕೊಳ್ಳಿ. ಇದಕ್ಕೆ ಸೌತೆಕಾಯಿ ಚೂರು, ಕ್ಯಾರಟ್ ತುರಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ತೆಂಗಿನ ತುರಿ ಹಾಗೂ ಉಪ್ಪು ಸೇರಿಸಿ ಮಿಶ್ರಣ ಮಾಡಿ.
ಒಂದು ಸಣ್ಣ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿ, ಅದಕ್ಕೆ ಸಾಸಿವೆ ಹಾಕಿ ಸಿಡಿದ ಬಳಿಕ ಕರಿಬೇವು, ಹಿಂಗು ಹಾಕಿ. ಈ ಒಗ್ಗರಣೆಯನ್ನು ಕೋಸಂಬರಿಯ ಮೇಲೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಯಲ್ಲಿ ಲಿಂಬೆರಸ ಹಿಂಡಿ ಮತ್ತೆ ಮಿಶ್ರಣ ಮಾಡಿ..