ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಕ್ಸಿಕೋ ಸಿಟಿ ಮತ್ತೆ ಜಾಗತಿಕ ಸುದ್ದಿಗಳ ಕೇಂದ್ರವಾಗಿದ್ದು, ಈ ಬಾರಿ ರಾಜಕೀಯ ನಾಯಕರೂ ಅಲ್ಲ, ಸಾಮಾನ್ಯ ನಾಗರಿಕರೂ ಅಲ್ಲ… ದೇಶದ ಹೊಸ ಪೀಳಿಗೆಯಾದ Gen-Z ಯುವಕರು ಬೀದಿಗಿಳಿದು ತಮ್ಮ ರೋಷವನ್ನು ಹೊರಹಾಕಿದ್ದಾರೆ. ಡ್ರಗ್ ಕಾರ್ಟೆಲ್ ಚಟುವಟಿಕೆಗಳನ್ನು ನಿಗ್ರಹಿಸಲು ವಿಫಲವಾಗಿದೆ ಜೊತೆಗೆ, ಹೆಚ್ಚುತ್ತಿರುವ ಹಿಂಸಾಚಾರ ಮತ್ತು ಸರ್ಕಾರದ ನಿಧಾನಗತಿ ಕ್ರಮಗಳ ವಿರುದ್ಧ ಒದ್ದಾಡುತ್ತಿರುವ ಯುವಕರ ಈ ಹೋರಾಟ ದೇಶದ ಆಡಳಿತವರ್ಗಕ್ಕೆ ದೊಡ್ಡ ಸಂದೇಶವಾಗಿದೆ.
ಮೈಕೋಕಾನ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ನೇರ ಹೋರಾಟ ನಡೆಸುತ್ತಿದ್ದ ಮೇಯರ್ ಕಾರ್ಲೋಸ್ ಮಾಂಜೊ ಅವರ ಹತ್ಯೆಯ ನಂತರ ಈ ಹೋರಾಟ ಇನ್ನಷ್ಟು ತೀವ್ರಗೊಂಡಿದೆ. ಭಯಾನಕ ಘಟನೆಗೆ ಪ್ರತಿಕ್ರಿಯೆ ನೀಡುತ್ತಿದ್ದ ಯುವಕರು “ನಮ್ಮ ಭವಿಷ್ಯ ಹಿಂಸಾಚಾರದ ನೆರಳಲ್ಲಿ ಕಳೆದುಹೋಗಬಾರದು” ಎಂಬ ಬೇಡಿಕೆ ಜೊತೆ ಬೀದಿಗಿಳಿದಿದ್ದಾರೆ.
ಪ್ರತಿಭಟನೆಗೆ ವಿರೋಧ ಪಕ್ಷಗಳ ನಾಯಕರಿಂದ ಸಹ ಬೆಂಬಲ ದೊರೆತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ #GenZForMexico ಹ್ಯಾಷ್‌ಟ್ಯಾಗ್ ಟ್ರೆಂಡ್ನಲ್ಲಿವೆ. ಮೊದಲು ಶಾಂತಿಯುತವಾಗಿ ಸಾಗುತ್ತಿದ್ದ ಮೆರವಣಿಗೆ ಪ್ರತಿಭಟನಾಕಾರರು ಪೊಲೀಸ್ ಅಧಿಕಾರಿಗಳ ಮೇಲೆ ಕಲ್ಲುಗಳು, ಪಟಾಕಿ ಎಸೆದ ಪರಿಣಾಮ ಇದು ವಿಕೋಪಕ್ಕೆ ತಿರುಗಿತು. ಭದ್ರತಾ ಸಿಬ್ಬಂದಿ ಅಶ್ರುವಾಯು ಮತ್ತು ಲಾಠಿಚಾರ್ಜ್ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಮೆಕ್ಸಿಕೋದಲ್ಲಿ “ಭವಿಷ್ಯ ನಮ್ಮದು, ನಿರ್ಧಾರವೂ ನಮ್ಮದೇ” ಎಂದು ಘೋಷಿಸುತ್ತಿರುವ Gen-Z ಹೋರಾಟ ಇನ್ನೊಂದು ರಾಜಕೀಯ ಬದಲಾವಣೆಗೆ ಕಾರಣವಾಗಬಹುದೇ ಎಂಬ ಪ್ರಶ್ನೆ ಈಗ ಜೋರಾಗಿದೆ.

