January18, 2026
Sunday, January 18, 2026
spot_img

Nepal protest | ನೇಪಾಳ ತೊರೆದ ಪ್ರಧಾನಿ ಕೆ.ಪಿ. ಒಲಿ? ಸಂಸತ್ತಿಗೆ ನುಗ್ಗಿ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳದಲ್ಲಿ ಭುಗಿಲೆದ್ದಿರುವ ಸಂಘರ್ಷ ತಾರಕಕ್ಕೇರಿದ್ದು, ಪ್ರಧಾನಿ ಕೆಪಿ ಶರ್ಮಾ ಒಲಿ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ.

ಚೀನಾಪರ ಒಲವು ಹೊಂದಿರುವ ಕೆಪಿ ಶರ್ಮಾ ಒಲಿ ಇತ್ತೀಚೆಗೆ ಫೇಸ್ ಬುಕ್, ಟ್ವಿಟರ್ ಮತ್ತು ಇನ್ ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಷೇಧಿಸುವ ಕ್ರಮ ಕೈಗೊಂಡಿದ್ದರು. ಸರ್ಕಾರದ ಈ ನಿರ್ಧಾರದ ವಿರುದ್ಧ ನೇಪಾಳದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ಪ್ರತಿಭಟನಾಕಾರರು ರಾಜಧಾನಿ ಕಠ್ಮಂಡುವಿನ ಹಲವು ಭಾಗಗಳಲ್ಲಿ “ಕೆಪಿ ಚೋರ್, ದೇಶ್ ಛೋಡ್” (ಕೆಪಿ ಕಳ್ಳ, ದೇಶ ಬಿಟ್ಟು ತೊಲಗಿ) ಮತ್ತು “ಭ್ರಷ್ಟ ನಾಯಕರ ವಿರುದ್ಧ ಕ್ರಮ ಕೈಗೊಳ್ಳಿ” ಮುಂತಾದ ಘೋಷಣೆಗಳನ್ನು ಕೂಗಿದರು.

ನೇಪಾಳದ ರಾಜಕೀಯ ನಾಯಕರ ಮನೆ-ಕಚೇರಿಗಳ ಮೇಲೆ ದಾಳಿ ಮಾಡಿರುವ ಪ್ರತಿಭಟನಾಕಾರರು ನಾಯಕರ ಮನೆಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪ್ರತಿಭಟನಾಕಾರರಿಗೆ ಮಣಿದಿರುವ ಹಲವು ಕ್ಯಾಬಿನೆಟ್ ಸಚಿವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ.

ನೇಪಾಳದ ನಾಲ್ಕನೇ ಅತಿದೊಡ್ಡ ರಾಷ್ಟ್ರೀಯ ಪಕ್ಷವಾದ ರಾಷ್ಟ್ರೀಯ ಸ್ವತಂತ್ರ ಪಕ್ಷದ ಇಪ್ಪತ್ತೊಂದು ಸಂಸದರು ಮಂಗಳವಾರ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ.

ನೇಪಾಳದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಆದೇಶ ವಿರೋಧಿಸಿ ನಡೆದ ತೀವ್ರ ಸ್ವರೂಪದ ಪ್ರತಿಭಟನೆಯಲ್ಲಿ 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಅಲ್ಲದೇ 250ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದರ ನಡುವೆ ನೇಪಾಳದ ಪ್ರಧಾನಿ ದೇಶ ತೊರೆದಿದ್ದಾರೆ ಎಂದು ಹೇಳಲಾಗಿದ್ದು, ನೇಪಾಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಭಾರತದ ಮೇಲೆ ಪರಿಣಾಮ ಬೀರಬಹುದು ಎನ್ನುವ ಆತಂಕ ಶುರುವಾಗಿದೆ.

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ, ವಿದೇಶಾಂಗ ಸಚಿವ ಅರ್ಜು ದೇವುಬಾ ಮತ್ತು 7 ಕ್ಯಾಬಿನೆಟ್ ಸಚಿವರು ಕಠ್ಮಂಡುವಿನಿಂದ ನೇಪಾಳ ಸೇನಾ ಹೆಲಿಕಾಪ್ಟರ್ ಗಳ ಮೂಲಕ ತೆರಳಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ವಿಡಿಯೋಗಳು ವ್ಯಾಪಕ ವೈರಲ್ ಆಗುತ್ತಿವೆ.

ಒಲಿ ಖಾಸಗಿ ನಿವಾಸಕ್ಕೂ ಬೆಂಕಿ
ನೇಪಾಳದ ವಿದ್ಯಾರ್ಥಿಗಳು ಮತ್ತು ಯುವಕರ ನೇತೃತ್ವದಲ್ಲಿ ನಡೆದ ಬೃಹತ್ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಎರಡನೇ ದಿನವೂ ಮುಂದುವರೆದಿರುವಂತೆಯೇ ಪ್ರತಿಭಟನಾಕಾರರು ಬಾಲ್ಕೋಟ್ ನಲ್ಲಿರುವ ಪ್ರಧಾನಿ ಕೆಪಿ ಒಲಿ ಅವರ ಖಾಸಗಿ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.

Must Read

error: Content is protected !!