ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ಸಿಎಂಎಸ್ ಕಂಪನಿಯ ಮಾಜಿ ಸಿಬ್ಬಂದಿ ನಡೆಸಿದ್ದ ಎಟಿಎಂ ಲೂಟಿ ಪ್ರಕರಣದ ಬೆನ್ನಲ್ಲೇ, ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದರೋಡೆ ಯತ್ನ ನಡೆದಿದೆ. ಇಂದಿರಾನಗರದಲ್ಲಿ ಬ್ಯಾಂಕ್ ಎಟಿಎಂ ಒಡೆಯಲು ಯತ್ನಿಸಿದ್ದ ನೇಪಾಳ ಮೂಲದ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
ಫೆಬ್ರವರಿ 10ರ ಮಧ್ಯರಾತ್ರಿ ಇಂದಿರಾನಗರದ ಡಬಲ್ ರೋಡ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂ ಕೇಂದ್ರಕ್ಕೆ ನುಗ್ಗಿದ್ದ ರಾಜೇಂದ್ರ ಸಿಂಗ್ (23), ದರೋಡೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದ. ಎಟಿಎಂ ಶಟ್ಟರ್ ಕೆಳಗಿಳಿಸಿ, ಒಳಗಿದ್ದ ಸಿಸಿಟಿವಿ ಕ್ಯಾಮೆರಾಗಳಿಗೆ ಬಟ್ಟೆ ಮತ್ತು ಟೇಪ್ ಸುತ್ತಿ ಮರೆಮಾಚಿದ್ದ. ಬಳಿಕ ತನ್ನ ಬಳಿಯಿದ್ದ ಕಟಿಂಗ್ ಮಷೀನ್ ಬಳಸಿ ಹಣದ ಪೆಟ್ಟಿಗೆಯನ್ನು ಕತ್ತರಿಸಲು ಹರಸಾಹಸ ಪಟ್ಟಿದ್ದ.
ಬಂಧಿತ ಆರೋಪಿಯು ನಗರದ ಖ್ಯಾತ ನಾಗಾರ್ಜುನ ಹೋಟೆಲ್‌ನ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಎಟಿಎಂ ಯಂತ್ರವನ್ನು ಎಷ್ಟೇ ಪ್ರಯತ್ನಿಸಿದರೂ ಒಡೆಯಲು ಸಾಧ್ಯವಾಗದಿದ್ದಾಗ, ಯಾವುದೇ ಹಣ ಸಿಗದೆ ನಿರಾಸೆಯಿಂದ ವಾಪಸ್ ಹೋಗಿದ್ದ.
ಈ ಸಂಬಂಧ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಾಂತ್ರಿಕ ಸಾಕ್ಷ್ಯ ಹಾಗೂ ಲಭ್ಯ ಸುಳಿವುಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಆರೋಪಿ ರಾಜೇಂದ್ರ ಸಿಂಗ್‌ನನ್ನು ಪತ್ತೆಹಚ್ಚಿ ಜೈಲಿಗಟ್ಟಿದ್ದಾರೆ.



