Friday, December 12, 2025

ಜೈಲಿನಲ್ಲಿ ಡ್ರಗ್ಸ್ ಸಾಗಿಸಲು ಹೊಸ ಯತ್ನ: ಶಿವಮೊಗ್ಗದಲ್ಲಿ ಭದ್ರತೆಗಿಲ್ಲ ಬೆಲೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಜಿಲ್ಲಾ ಕೇಂದ್ರ ಕಾರಾಗೃಹದೊಳಗೆ ನಿಷಿದ್ಧ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ನಿರಂತರ ಪ್ರಯತ್ನಗಳು ಮತ್ತೊಮ್ಮೆ ಬಯಲಿಗೆ ಬಂದಿವೆ. ಇತ್ತೀಚಿನ ಘಟನೆಯಲ್ಲಿ, ಕೈದಿಯೊಬ್ಬನನ್ನು ಭೇಟಿ ಮಾಡಲು ಬಂದಿದ್ದ ವ್ಯಕ್ತಿಯೋರ್ವ, ತಾನು ತಂದಿದ್ದ ಪ್ಯಾಂಟಿನ ಜೇಬು ಮತ್ತು ಸೊಂಟದ ಪಟ್ಟಿಯೊಳಗೆ ಬಚ್ಚಿಟ್ಟು ಗಾಂಜಾವನ್ನು ಸಾಗಿಸಲು ಯತ್ನಿಸಿದ್ದಾನೆ.

ಕೈದಿ ಅಶೋಕ್ ಎಂಬಾತನನ್ನು ಭೇಟಿ ಮಾಡಲು ಬಂದಿದ್ದ ಶಕೀಬ್ ಎಂಬಾತ ಈ ಕೃತ್ಯ ಎಸಗಲು ಪ್ರಯತ್ನಿಸಿದ್ದಾನೆ. ಮಂಗಳವಾರ (ಡಿ. 9) ಸಂಜೆ ಶಕೀಬ್ ಮಾರುತಿ ಸುಜುಕಿ ಕಾರಿನಲ್ಲಿ ಜೈಲಿಗೆ ಬಂದಿದ್ದನು. ಕರ್ತವ್ಯ ನಿರತ ಅಧಿಕಾರಿಗಳು ಸಂದರ್ಶಕನ ತಪಾಸಣೆ ಮತ್ತು ಆತ ಕೈದಿಗೆ ನೀಡಲು ತಂದಿದ್ದ ಬಟ್ಟೆ ಹಾಗೂ ಇತರ ವಸ್ತುಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಕಣ್ಣಿಗೆ ಜೀನ್ಸ್‌ ಪ್ಯಾಂಟ್‌ಗಳ ವಿನ್ಯಾಸದಲ್ಲಿ ಅನುಮಾನ ಮೂಡಿದೆ.

ಪರಿಶೀಲನೆ ವೇಳೆ, ಶಕೀಬ್ ತಂದಿದ್ದ ನಾಲ್ಕು ಜೀನ್ಸ್‌ ಪ್ಯಾಂಟ್‌ಗಳ ಸೊಂಟದ ಪಟ್ಟಿಯ ಒಳಗಡೆ ಹಾಗೂ ಜಿಪ್ ಪಟ್ಟಿಯಲ್ಲಿ ಗಾಂಜಾ ಬಚ್ಚಿಟ್ಟಿರುವುದು ಪತ್ತೆಯಾಗಿದೆ. ಈ ಮಹತ್ವದ ಸುಳಿವು ದೊರೆತ ನಂತರ ಶಕೀಬ್‌ನನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದಾಗ, ಆತನ ಬಳಿ ₹ 9,910 ನಗದು ಹಣ ಸಹ ಪತ್ತೆಯಾಗಿದೆ. ಕಾರಾಗೃಹದ ಭದ್ರತಾ ಸಿಬ್ಬಂದಿ ಕೂಡಲೇ ಗಾಂಜಾ, ನಗದು ಹಾಗೂ ಆತ ಬಂದಿದ್ದ ಮಾರುತಿ ಸುಜುಕಿ ಕಾರನ್ನು ವಶಪಡಿಸಿಕೊಂಡು ಕ್ರಮ ಜರುಗಿಸಿದ್ದಾರೆ.

ಜೈಲಿನ ನಿಯಮಗಳ ಪ್ರಕಾರ, ಗಾಂಜಾ ಮತ್ತು ನಗದು ಎರಡೂ ನಿಷಿದ್ಧ ವಸ್ತುಗಳಾಗಿವೆ. ಇವುಗಳನ್ನು ಅಕ್ರಮವಾಗಿ ಸಾಗಿಸಲು ಯತ್ನಿಸಿದ ಸಂದರ್ಶಕ ಶಕೀಬ್ ಮತ್ತು ಕೈದಿ ಅಶೋಕ್ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ ಅಧಿನಿಯಮ-2022) ಕಲಂಗಳ ಅಡಿಯಲ್ಲಿ ಹಾಗೂ ಇತರೆ ಸೂಕ್ತ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಮೊಗ್ಗ ನಗರದಲ್ಲಿ ಗಾಂಜಾ ಹಾವಳಿ ನಿಯಂತ್ರಣಕ್ಕೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರೂ, ಕೇಂದ್ರ ಕಾರಾಗೃಹದೊಳಗೆ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಈ ಹಿಂದೆ ಬಾಳೆ ದಿಂಡು ಮತ್ತು ಜೈಲು ಅಧಿಕಾರಿಯ ಒಳಉಡುಪಿನಲ್ಲಿ ಗಾಂಜಾ ಸಾಗಾಟದಂತಹ ಪ್ರಕರಣಗಳು ಬಯಲಿಗೆ ಬಂದಿದ್ದವು.

error: Content is protected !!