ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ನ್ಯಾಯಾಂಗದಲ್ಲಿ ಮಹತ್ವದ ಬದಲಾವಣೆ ನಡೆಯಲಿದ್ದು, ಹಿರಿಯ ನ್ಯಾಯಾಧೀಶರಾದ ಸೂರ್ಯಕಾಂತ್ ಅವರು ನವೆಂಬರ್ 24 ರಂದು ದೇಶದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಬಳಿಕ ಅತಿ ಉನ್ನತ ಹುದ್ದೆಯನ್ನು ವಹಿಸಿಕೊಳ್ಳುತ್ತಿರುವ ಸೂರ್ಯಕಾಂತ್ ಅವರು ಫೆಬ್ರವರಿ 9, 2027 ರವರೆಗೆ ಸಿಜೆಐ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
1962ರ ಫೆಬ್ರವರಿ 10ರಂದು ಹರಿಯಾಣದ ಹಿಸಾರ್‌ನಲ್ಲಿ ಜನಿಸಿದ ಸೂರ್ಯಕಾಂತ್, ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬೆಳೆದವರು. ಹಿಸಾರ್‌ನಲ್ಲಿ ವಕೀಲ ವೃತ್ತಿ ಆರಂಭಿಸಿದ ಅವರು ನಂತರ ಪಂಜಾಬ್–ಹರಿಯಾಣ ಹೈಕೋರ್ಟ್‌ನಲ್ಲಿ ಖ್ಯಾತಿ ಗಳಿಸಿದರು. 2018ರಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, ಬಳಿಕ ಸುಪ್ರೀಂ ಕೋರ್ಟ್‌ಗೆ ಏರಿಕೆಗೊಂಡರು.
ತಮ್ಮ ಸೇವಾ ಅವಧಿಯಲ್ಲಿ ಹಲವು ಮಹತ್ವದ ಮತ್ತು ದೀರ್ಘಾವಧಿಗೆ ಪರಿಣಾಮ ಬೀರುವ ತೀರ್ಪುಗಳನ್ನು ನೀಡಿದ ಸೂರ್ಯಕಾಂತ್, ಈಗ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಾಂಗದ ಮತ್ತೊಂದು ಹೊಸ ಅಧ್ಯಾಯ ಆರಂಭಿಸಲಿದ್ದಾರೆ.

