Saturday, December 20, 2025

ಗ್ರಾಮೀಣ ಉದ್ಯೋಗ ಯೋಜನೆಗೆ ಹೊಸ ರೂಪ: ವಿಪಕ್ಷಗಳ ಬಹಿಷ್ಕಾರದ ನಡುವೆ ಐತಿಹಾಸಿಕ ವಿಧೇಯಕ ಅಂಗೀಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಿರುವ ‘ರೋಜ್‌ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಮಸೂದೆ-2025’ ಕ್ಕೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರ ಸಿಕ್ಕಿದೆ. ಗುರುವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದ ಈ ಮಸೂದೆಯು, ಶುಕ್ರವಾರ ಮಧ್ಯರಾತ್ರಿ ರಾಜ್ಯಸಭೆಯಲ್ಲೂ ಧ್ವನಿಮತದ ಮೂಲಕ ಅನುಮೋದನೆ ಪಡೆಯಿತು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಿಸಿ, ಹೊಸ ರೂಪದಲ್ಲಿ ಮಸೂದೆಯನ್ನು ಮಂಡಿಸಿದ ಕೇಂದ್ರ ಸರ್ಕಾರದ ಕ್ರಮಕ್ಕೆ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ಸದನದಲ್ಲಿ ಗದ್ದಲ, ಕೋಲಾಹಲ ಏರ್ಪಟ್ಟಿದ್ದರಿಂದ ಚರ್ಚೆಯು ಮಧ್ಯರಾತ್ರಿಯವರೆಗೂ ಮುಂದುವರಿಯಿತು.

ಮಸೂದೆಯನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಈ ನಡುವೆಯೇ ಕೇಂದ್ರ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಮಸೂದೆಯನ್ನು ಮಂಡಿಸಿ, ನಡುರಾತ್ರಿ 12:15ರ ಸುಮಾರಿಗೆ ಸದನದ ಅಂಗೀಕಾರ ಪಡೆದುಕೊಂಡರು.

ಮಸೂದೆಯ ಅಂಗೀಕಾರವನ್ನು ವಿರೋಧಿಸಿ ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಸಂಸತ್ ಭವನದ ಆವರಣದಲ್ಲೇ ರಾತ್ರಿ ಕಳೆದರು. ಸಂವಿಧಾನ ಸದನದ ಗೇಟ್‌ ಬಳಿ ಜಮಾಯಿಸಿದ ಸಂಸದರು, ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬೆಳಗ್ಗಿನ ಜಾವದವರೆಗೂ ಅಹೋರಾತ್ರಿ ಪ್ರತಿಭಟನೆ ನಡೆಸಿದರು.

error: Content is protected !!