ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಲ್ಲಿ ಓದುವ ಆಸಕ್ತಿಯನ್ನು ಬೆಳೆಸುವ ಜೊತೆಗೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಉತ್ತರ ಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ವಿದ್ಯಾರ್ಥಿಗಳಿಗೆ ದಿನನಿತ್ಯ ನ್ಯೂಸ್ ಪೇಪರ್ ಓದುವುದು ಕಡ್ಡಾಯವಾಗಲಿದೆ.
ಸರ್ಕಾರದ ಹೊಸ ನಿರ್ದೇಶನದಂತೆ, ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳು ಶಾಲಾ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಈಗಾಗಲೇ ನವೆಂಬರ್‌ನಲ್ಲಿ ಹೊರಡಿಸಿದ್ದ ಓದುವ ಸಂಸ್ಕೃತಿ ಉತ್ತೇಜಿಸುವ ಆದೇಶಕ್ಕೆ ಪೂರಕವಾಗಿ ಈ ಕ್ರಮ ಜಾರಿಗೊಂಡಿದೆ.
ಪ್ರತಿದಿನ ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಕನಿಷ್ಠ 10 ನಿಮಿಷಗಳನ್ನು ಪತ್ರಿಕೆ ಓದಿಗೆ ಮೀಸಲಿಡಬೇಕು ಎಂದು ಸೂಚಿಸಲಾಗಿದೆ. ವಿದ್ಯಾರ್ಥಿಗಳು ಸಂಪಾದಕೀಯ ಲೇಖನಗಳು, ದೇಶ-ವಿದೇಶದ ಪ್ರಮುಖ ಸುದ್ದಿಗಳು ಹಾಗೂ ಕ್ರೀಡಾ ಸುದ್ದಿಗಳಲ್ಲಿನ ಸಕಾರಾತ್ಮಕ ವಿಷಯಗಳನ್ನು ಓದಿ ಅರ್ಥೈಸಬೇಕು.
ಇದನ್ನೂ ಓದಿ:
ಡಿಜಿಟಲ್ ಮಾಧ್ಯಮಗಳ ಬದಲು ಮುದ್ರಿತ ಪತ್ರಿಕೆಗಳ ಬಳಕೆಗೆ ಒತ್ತು ನೀಡಲಾಗಿದೆ. ಮುದ್ರಿತ ಪತ್ರಿಕೆ ಓದುವುದರಿಂದ ಏಕಾಗ್ರತೆ ಮತ್ತು ಗಮನ ಶಕ್ತಿ ಹೆಚ್ಚುತ್ತದೆ ಎಂಬುದು ಸರ್ಕಾರದ ನಂಬಿಕೆ. ನಿಯಮಿತ ಪತ್ರಿಕೆ ಓದುವಿಕೆ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ, ಪ್ರಚಲಿತ ವಿದ್ಯಮಾನಗಳ ಅರಿವು, ಭಾಷಾ ಶೈಲಿ ಮತ್ತು ಬರವಣಿಗೆ ಕೌಶಲ್ಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗಿದೆ.
ಇದೇ ವೇಳೆ, 6ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಸುದ್ದಿಗಳ ಸ್ಕ್ರ್ಯಾಪ್‌ಬುಕ್ ತಯಾರಿಕೆ, ಸಂಪಾದಕೀಯಗಳ ಕುರಿತ ಚರ್ಚೆ ಮತ್ತು ಸುದ್ದಿ ವಿಶ್ಲೇಷಣೆಯಂತಹ ಚಟುವಟಿಕೆಗಳನ್ನೂ ಶಾಲೆಗಳಲ್ಲಿ ಕಡ್ಡಾಯಗೊಳಿಸಲಾಗಿದೆ.

