ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವು ಇಂದು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್‌ಅಪ್ ಹಬ್ ಆಗಿ ಹೊರಹೊಮ್ಮುತ್ತಿದ್ದು, ಯುವ ಉದ್ಯಮಿಗಳು ತಯಾರಿಸುವ ಪ್ರತಿಯೊಂದು ಉತ್ಪನ್ನವೂ ಜಾಗತಿಕ ಮಟ್ಟದ ಶ್ರೇಷ್ಠತೆಯನ್ನು ಹೊಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಆಶಿಸಿದ್ದಾರೆ.
ಈ ವರ್ಷದ ಮೊದಲ ‘ಮನ್ ಕಿ ಬಾತ್’ ಕಾರ್ಯಕ್ರಮದ (130ನೇ ಸಂಚಿಕೆ) ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್ ಕ್ಷೇತ್ರ ಮತ್ತು ಪ್ರಜಾಪ್ರಭುತ್ವದ ಹಬ್ಬದ ಬಗ್ಗೆ ಮಹತ್ವದ ವಿಚಾರಗಳನ್ನು ಹಂಚಿಕೊಂಡರು.
ಹತ್ತು ವರ್ಷಗಳ ಹಿಂದೆ ಕಲ್ಪಿಸಿಕೊಳ್ಳಲು ಅಸಾಧ್ಯವಾಗಿದ್ದ ಕ್ಷೇತ್ರಗಳಲ್ಲಿ ಇಂದು ಭಾರತೀಯ ಯುವಜನರು ಸಾಧನೆ ಮಾಡುತ್ತಿದ್ದಾರೆ. ಎಐ (AI), ಬಾಹ್ಯಾಕಾಶ, ಅಣುಶಕ್ತಿ, ಸೆಮಿಕಂಡಕ್ಟರ್‌ಗಳು ಮತ್ತು ಹಸಿರು ಹೈಡ್ರೋಜನ್‌ನಂತಹ ಅತ್ಯಾಧುನಿಕ ಕ್ಷೇತ್ರಗಳಲ್ಲಿ ನಮ್ಮ ಸ್ಟಾರ್ಟ್‌ಅಪ್‌ಗಳು ಕ್ರಾಂತಿ ಮಾಡುತ್ತಿವೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು ಪ್ರಧಾನಿ ವಿಶೇಷವಾಗಿ ಶ್ಲಾಘಿಸಿದರು.
ಯುವಜನತೆಗೆ ಗುಣಮಟ್ಟದ ಮಂತ್ರ ಬೋಧಿಸಿದ ಮೋದಿ, “ನಾವು ತಯಾರಿಸುವ ಉತ್ಪನ್ನ ಯಾವುದೇ ಇರಲಿ—ಅದು ಬಟ್ಟೆಯಾಗಿರಲಿ, ಎಲೆಕ್ಟ್ರಾನಿಕ್ಸ್ ಆಗಲಿ ಅಥವಾ ಪ್ಯಾಕೇಜಿಂಗ್ ಆಗಲಿ, ಅದನ್ನು ನೋಡಿದ ಕೂಡಲೇ ಇದು ‘ಭಾರತೀಯ ಗುಣಮಟ್ಟ’ ಎಂದು ಜಗತ್ತು ಗುರುತಿಸುವಂತಾಗಬೇಕು. ಶ್ರೇಷ್ಠತೆಯೇ ನಮ್ಮ ಮಾನದಂಡವಾಗಲಿ” ಎಂದು ಸಂಕಲ್ಪ ಮಾಡುವಂತೆ ಕರೆ ನೀಡಿದರು.



