ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಜನತಾ ಪಕ್ಷದಲ್ಲಿ ಮಹತ್ವದ ನಾಯಕತ್ವ ಬದಲಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿರುವ ನಿತಿನ್ ನಬಿನ್ ಜನವರಿ 20ರಂದು ಬಿಜೆಪಿಯ ಪೂರ್ಣಾವಧಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಪಕ್ಷದ ಮೂಲಗಳ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಪ್ರಕ್ರಿಯೆ ಜನವರಿ 19ರಂದು ನಡೆಯಲಿದ್ದು, ಮುಂದಿನ ದಿನ ಅಧಿಕೃತ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಕಳೆದ ಡಿಸೆಂಬರ್ 15ರಂದು ನಿತಿನ್ ನಬಿನ್ ಅವರನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. 45 ವರ್ಷದ ನಬಿನ್ ಬಿಹಾರದ ಪಾಟ್ನಾ ಜಿಲ್ಲೆಯ ಬಂಕಿಪುರ ಕ್ಷೇತ್ರದ ಶಾಸಕರಾಗಿದ್ದು, ಐದು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಅನುಭವ ಹೊಂದಿದ್ದಾರೆ.
ಯುವ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ಬಿಜೆಪಿ ಕಾರ್ಯತಂತ್ರದ ಭಾಗವಾಗಿ ನಬಿನ್ ಅವರಿಗೆ ಈ ಮಹತ್ವದ ಸ್ಥಾನ ಲಭಿಸಿದೆ ಎನ್ನಲಾಗುತ್ತಿದೆ. ಸಂಘಟನಾ ಚಾತುರ್ಯ, ಶಿಸ್ತು ಮತ್ತು ಪರಿಣಾಮಕಾರಿ ಸಂವಹನ ಶೈಲಿಗೆ ಅವರು ಪಕ್ಷದೊಳಗೆ ಗುರುತಿಸಿಕೊಂಡಿದ್ದಾರೆ. ಛತ್ತೀಸ್‌ಗಢದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಬಿನ್, ದೆಹಲಿ ಮತ್ತು ಬಿಹಾರ ಚುನಾವಣೆಯಲ್ಲಿಯೂ ಪ್ರಮುಖ ಹೊಣೆಗಾರಿಕೆ ನಿಭಾಯಿಸಿದ್ದರು.


