ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅಭಿನಯಿಸಿರುವ ವಾರ್ ಡ್ರಾಮಾ ‘ಇಕ್ಕಿಸ್’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿ ಕೆಲವೇ ಕ್ಷಣಗಳಲ್ಲಿ, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಹಿರಿಯ ನಟ ಧರ್ಮೇಂದ್ರ ಅವರು ನಿಧನರಾಗಿದ್ದಾರೆ.
ಶ್ರೀರಾಮ್ ರಾಘವನ್ ನಿರ್ದೇಶನದ ಈ ಚಿತ್ರದಲ್ಲಿ ಧರ್ಮೇಂದ್ರ ಅವರು ಅಗಸ್ತ್ಯ ನಂದ ಅಭಿನಯಿಸಿರುವ ಪಾತ್ರದ ತಂದೆಯಾಗಿಯೂ, ರಾಷ್ಟ್ರನಿಷ್ಠೆ ಮತ್ತು ತ್ಯಾಗದ ಸಂಕೇತವಾಗಿಯೂ ಕಾಣಿಸಿಕೊಳ್ಳುತ್ತಾರೆ. ಮ್ಯಾಡಾಕ್ ಫಿಲ್ಮ್ಸ್ ಹಂಚಿಕೊಂಡ ಪೋಸ್ಟರ್‌ಗೆ “ತಂದೆಯರು ಪುತ್ರರನ್ನು ಬೆಳೆಸುತ್ತಾರೆ, ಲೆಜೆಂಡ್‌ಗಳು ರಾಷ್ಟ್ರಗಳನ್ನು ನಿರ್ಮಿಸುತ್ತಾರೆ” ಎಂಬ ಶೀರ್ಷಿಕೆ ನೀಡಲಾಗಿದ್ದು, ಧರ್ಮೇಂದ್ರ ಅವರ ಪಾತ್ರದ ತೀವ್ರತೆಯನ್ನೂ ಗೌರವವನ್ನೂ ತೋರಿಸುತ್ತದೆ.
ಸ್ವಲ್ಪ ಕಾಲ ಆರೋಗ್ಯ ಸಮಸ್ಯೆಯಿಂದ ಚಿತ್ರೀಕರಣದಿಂದ ದೂರವಿದ್ದ ಧರ್ಮೇಂದ್ರ ಅವರಿಗಾಗಿ ‘ಇಕ್ಕಿಸ್’ ಬಹುನಿರೀಕ್ಷಿತ ಚಿತ್ರವಾಗಿತ್ತು. ಅವರು ಭಾರತ ದೇಶದ ಕಿರಿಯ ಪರಮ ವೀರ ಚಕ್ರ ಪುರಸ್ಕೃತ, 1971ರ ಇಂಡೋ–ಪಾಕ್ ಯುದ್ಧದಲ್ಲಿ ಹುತಾತ್ಮರಾದ ಅರುಣ್ ಖೇತರ್ಪಾಲ್ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು. ಧರ್ಮೇಂದ್ರ ಅವರನ್ನು ಚಿತ್ರರಂಗದಲ್ಲಿ ಕೊನೆಯ ಬಾರಿ “ತೇರಿ ಬಾತೇ ಮೇ ಐಸಾ ಉಲ್ಜಾ ಜಿಯಾ” ಹಾಗೂ “ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ” ಚಿತ್ರಗಳಲ್ಲಿ ನೋಡಿದ್ದೇವೆ.

