ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಟ್ ಕ್ರಿಕೆಟ್‌ನಲ್ಲಿ ಇತ್ತೀಚಿನ ಹಿನ್ನಡೆಯಿಂದ ಭಾರತ ತಂಡ ದೊಡ್ಡ ತೀರ್ಮಾನಕ್ಕೆ ಬಂದಿದೆ. ಪ್ರತೀ ಟೆಸ್ಟ್ ಸರಣಿಗೆ ಮುನ್ನ 15 ದಿನಗಳ ವಿಶೇಷ ಅಭ್ಯಾಸ ಶಿಬಿರಗಳನ್ನು ಆಯೋಜಿಸುವ ಯೋಜನೆಗೆ ಬಿಸಿಸಿಐ ಸಮ್ಮತಿ ನೀಡಿದೆ ಎಂದು ವರದಿಯಾಗಿದೆ. ಈ ಮಹತ್ವದ ಸಲಹೆಯನ್ನು ಮುಂದಿಟ್ಟಿದ್ದು ಭಾರತ ಟೆಸ್ಟ್ ತಂಡದ ನಾಯಕ ಶುಭ್‌ಮನ್ ಗಿಲ್.
ಗಿಲ್ ಅವರ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದ್ದು, ಮುಂದಿನ ಎಲ್ಲ ಟೆಸ್ಟ್ ಸರಣಿಗಳಿಗೂ ಮುನ್ನ ಟೀಮ್ ಇಂಡಿಯಾ ದೀರ್ಘಾವಧಿಯ ತಯಾರಿಯನ್ನು ನಡೆಸಲಿದೆ. ಈ ಅಭ್ಯಾಸ ಶಿಬಿರಗಳ ಮೂಲಕ ಬಲಿಷ್ಠ ಹಾಗೂ ಸ್ಥಿರ ಟೆಸ್ಟ್ ತಂಡ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.
ಕೋಚ್ ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಭಾರತ ತಂಡ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರೂ, ಟೆಸ್ಟ್ ಮಾದರಿಯಲ್ಲಿ ನಿರೀಕ್ಷಿತ ಫಲಿತಾಂಶಗಳು ಬಂದಿಲ್ಲ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ 2-0 ಅಂತರದಿಂದ ಸೋಲನುಭವಿಸಿತ್ತು. ಅದಕ್ಕೂ ಮುನ್ನ ನ್ಯೂಝಿಲೆಂಡ್ ವಿರುದ್ಧ ತವರಿನಲ್ಲಿ 3-0 ಅಂತರದ ಸೋಲು ಕಂಡಿದ್ದು, ಇದು 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೊದಲ ಬಾರಿ ಎಂಬ ಕೆಟ್ಟ ದಾಖಲೆ ನಿರ್ಮಿಸಿತು.
ಇದನ್ನೂ ಓದಿ: FOOD | ರುಚಿಕರವಾಗಿ ಬೆಂಡೆಕಾಯಿ ಪಲ್ಯ ಮಾಡೋದು ಹೇಗೆ ಗೊತ್ತಾ? ಈ ರೆಸಿಪಿ ನೋಡಿ
ಇನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 408 ರನ್‌ಗಳ ಭಾರೀ ಅಂತರದ ಸೋಲು ಭಾರತ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ದೊಡ್ಡ ಸೋಲಾಗಿ ದಾಖಲಾಗಿದೆ. ಈ ನಿರಂತರ ಮುಖಭಂಗವೇ ಹೊಸ ಯೋಜನೆಗೆ ಕಾರಣವಾಗಿದೆ.
ಬಿಸಿಸಿಐ ಈ ಅಭ್ಯಾಸ ಶಿಬಿರಗಳಲ್ಲಿ ತಂಡದ ಸಂಯೋಜನೆ, ತಂತ್ರಗಳು ಮತ್ತು ಆಟಗಾರರ ತಯಾರಿಗೆ ಸಂಬಂಧಿಸಿದಂತೆ ಶುಭ್‌ಮನ್ ಗಿಲ್‌ಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲು ಸಿದ್ಧವಾಗಿದೆ. ಯುವ ಆಟಗಾರರೊಂದಿಗೆ ಹೊಸ ದಿಕ್ಕಿನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಪ್ರಾಬಲ್ಯ ಸಾಧಿಸುವ ಗುರಿಯೊಂದಿಗೆ ಟೀಮ್ ಇಂಡಿಯಾ ಮುಂದಾಗಿದೆ.

