ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷಾಚರಣೆಗೂ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆ ಮತ್ತು ಅಗ್ನಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇತ್ತೀಚೆಗೆ ಗೋವಾದ ನೈಟ್ ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ದೆಹಲಿ ಪೊಲೀಸರು, ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ವೇಳೆ ಯಾವುದೇ ಅಪಾಯ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಬಾರ್, ಕ್ಲಬ್, ಪಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಟಾಕಿ ಅಥವಾ ಫೈರ್ ವರ್ಕ್ಸ್ ಮೂಲಕ ಹೊಸ ವರ್ಷ ಆಚರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಹೊಸ ಮಾರ್ಗಸೂಚಿಗಳಂತೆ, ದೆಹಲಿ ವ್ಯಾಪ್ತಿಯ ಎಲ್ಲ ಹೋಟೆಲ್, ಕ್ಲಬ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಯಾವುದೇ ರೀತಿಯ ಪಟಾಕಿ ಸಿಡಿಸುವಂತಿಲ್ಲ. ಹಸಿರು ಪಟಾಕಿ ಅಥವಾ ಎಲೆಕ್ಟ್ರಿಕ್ ಪಟಾಕಿಗೂ ಅವಕಾಶವಿಲ್ಲ. ಅಗ್ನಿ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ತಕ್ಷಣದ ಪಾರಾಗುವ ವ್ಯವಸ್ಥೆ, ಕಾರ್ಯನಿರ್ವಹಿಸುವ ಅಗ್ನಿಶಾಮಕ ಉಪಕರಣಗಳು ಹಾಗೂ ನವೀಕೃತ ಲೈಸೆನ್ಸ್ ಕಡ್ಡಾಯವಾಗಿವೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
ದೆಹಲಿಯಲ್ಲಿ ನೋಂದಣಿಯಾದ ಸುಮಾರು 950 ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ಈ ಸಂಬಂಧ ಅಧಿಕೃತ ನೋಟಿಸ್ ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆ ವೇಳೆ ಸಾರ್ವಜನಿಕ ಹಾಗೂ ಖಾಸಗಿ ಪಾರ್ಟಿಗಳಲ್ಲಿಯೂ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ.

