Friday, December 19, 2025

ಹೊಸ ವರುಷಕ್ಕೆ ಹೊಸ ರೂಲ್ಸ್‌: ಬೆಂಗಳೂರು ಪಬ್‌ಗಳಿಗೆ 19 ಅಂಶಗಳ ಹೊಸ ಮಾರ್ಗಸೂಚಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋವಾದ ನೈಟ್‌ಕ್ಲಬ್‌ನಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ, ಹೊಸ ವರ್ಷದ ಸ್ವಾಗತಕ್ಕಾಗಿ ಸಜ್ಜಾಗುತ್ತಿರುವ ಬೆಂಗಳೂರು ನಗರದಲ್ಲಿ ಇದೀಗ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಸರ್ಕಾರ, ಪೊಲೀಸ್ ಇಲಾಖೆ ಹಾಗೂ ನ್ಯಾಷನಲ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಜಂಟಿಯಾಗಿ ನಗರದ ಪಬ್‌ಗಳು, ಬಾರ್‌ಗಳು ಮತ್ತು ಕ್ಲಬ್‌ಗಳಿಗೆ 19 ಅಂಶಗಳ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಪ್ರಕಟಿಸಿವೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು, ಸುರಕ್ಷತಾ ಮಾನದಂಡಗಳು ಮತ್ತು ನಿಯಮ ಉಲ್ಲಂಘಿಸಿದರೆ ಎದುರಿಸಬೇಕಾಗುವ ಕ್ರಮಗಳ ವಿವರ ಇಲ್ಲಿದೆ:

ಧ್ವನಿ, ಸ್ಥಳ ಹಾಗೂ ಟಿಕೆಟ್‌ ಮಿತಿ ನಿಯಮಗಳು
ಕಡ್ಡಾಯ ಪರವಾನಗಿ: ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಇಲಾಖೆಗಳಿಂದ ಪೂರ್ವಾನುಮತಿ ಕಡ್ಡಾಯ. ಹೊಸ ವರ್ಷಾಚರಣೆಗೆ ನಿಗದಿಪಡಿಸಿದ ಸಮಯದ ಮಿತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಧ್ವನಿವರ್ಧಕ ಮಿತಿ: ಧ್ವನಿವರ್ಧಕಗಳ ಬಳಕೆಗಾಗಿ ಪರವಾನಗಿ ಪಡೆದು ನಿಗದಿತ ಶಬ್ದ ಮಿತಿಯನ್ನು ಮಾತ್ರ ಅನುಸರಿಸಬೇಕು.

ಸ್ಥಳಾವಕಾಶ ಮಿತಿ: ಸ್ಥಳಾವಕಾಶಕ್ಕೆ ಅನುಗುಣವಾಗಿ ಮಾತ್ರ ಟಿಕೆಟ್‌/ಪಾಸ್‌ಗಳನ್ನು ವಿತರಿಸಬೇಕು. ನೆಲಮಹಡಿ, ಪಾರ್ಕಿಂಗ್ ಸ್ಥಳ ಮತ್ತು ಟೆರೇಸ್‌ಗಳಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ.

ಸುರಕ್ಷತಾ ಮಾನದಂಡಗಳು ಮತ್ತು ತಪಾಸಣೆ
ಅಗ್ನಿ ಸುರಕ್ಷತೆ: ಕಾರ್ಯಕ್ರಮದ ಸ್ಥಳಗಳಲ್ಲಿ ಅಗ್ನಿ ನಂದಿಸುವ ಪರಿಕರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಜೊತೆಗೆ, ನಿರ್ಗಮನ ದ್ವಾರಗಳು ದೊಡ್ಡದಾಗಿರಬೇಕು ಮತ್ತು ಸುಲಭವಾಗಿ ತಲುಪುವಂತಿರಬೇಕು.

ಸಿಸಿಟಿವಿ ಮತ್ತು ಸಂಗ್ರಹ: ಕಾರ್ಯಕ್ರಮದ ಪ್ರತಿ ಜಾಗದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು ಮತ್ತು ಅದರ ದೃಶ್ಯಗಳನ್ನು ಕನಿಷ್ಠ 30 ದಿನಗಳವರೆಗೆ ಸಂಗ್ರಹ ಮಾಡಿಡಬೇಕು.

ವಸ್ತು/ವ್ಯಕ್ತಿಗಳ ತಪಾಸಣೆ: ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬರನ್ನು ತಪಾಸಣೆಗೊಳಪಡಿಸಬೇಕು. ಯಾವುದೇ ಸಂಶಯಾಸ್ಪದ ವಸ್ತು ಅಥವಾ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು.

ನಿಷೇಧಗಳು ಮತ್ತು ಕಠಿಣ ಎಚ್ಚರಿಕೆ
ಮಾದಕ ವಸ್ತುಗಳ ನಿಷೇಧ: ಕಾರ್ಯಕ್ರಮದಲ್ಲಿ ಮಾದಕ ವಸ್ತುಗಳ (ಡ್ರಗ್ಸ್) ಬಳಕೆ ಕಂಡುಬಂದರೆ ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು. ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದರೆ, ಕಟ್ಟಡದ ಮಾಲೀಕರು/ಮ್ಯಾನೇಜರ್‌ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ.

ಪಟಾಕಿ ನಿಷೇಧ: ಹೊಸ ವರ್ಷಾಚರಣೆಯ ವೇಳೆ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಖಾಸಗಿ ಪಾರ್ಟಿ: ಹೋಟೆಲ್‌ಗಳ ರೂಮ್‌ಗಳಲ್ಲಿ ಗುಂಪು ಸೇರಿ ನಿಯಮ ಬಾಹಿರವಾಗಿ ಖಾಸಗಿ ಪಾರ್ಟಿಗಳನ್ನು ಆಯೋಜಿಸಲು ಅವಕಾಶ ನೀಡಬಾರದು.

ಮದ್ಯ ಪೂರೈಕೆ: ಲೈಸೆನ್ಸ್ ಇಲ್ಲದ ಔಟ್ ಡೋರ್ ಸ್ಥಳಗಳಲ್ಲಿ ಮದ್ಯ ಸರಬರಾಜಿಗೆ ಸಂಪೂರ್ಣ ನಿಷೇಧವಿದೆ.

ಸ್ಕ್ರೀನಿಂಗ್: ಕಾರ್ಯಕ್ರಮಕ್ಕೆ ಸಂಬಂಧಿಸಿದ ಸ್ಕ್ರೀನ್‌ಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.

ಸಿಬ್ಬಂದಿ ಮತ್ತು ಸೆಲೆಬ್ರಿಟಿ ನಿಯಮಗಳು
ಸೆಕ್ಯುರಿಟಿ ನೇಮಕ: ಪಾರ್ಕಿಂಗ್ ಸ್ಥಳಗಳು ಮತ್ತು ಮಹಿಳೆಯರು ಇರುವ ಸ್ಥಳಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು.

ಏಜೆನ್ಸಿ ನೊಂದಣಿ: ಸೆಕ್ಯೂರಿಟಿ ಸಿಬ್ಬಂದಿ ಮತ್ತು ಬೌನ್ಸರ್‌ಗಳನ್ನು ನಿಯೋಜಿಸುವ ಏಜೆನ್ಸಿಗಳು ಕಡ್ಡಾಯವಾಗಿ ‘PSARA’ದಲ್ಲಿ ನೊಂದಣಿ ಮಾಡಿರಬೇಕು.

ಸಿಬ್ಬಂದಿ ಮಾಹಿತಿ: ಪಾರ್ಟಿಯಲ್ಲಿರುವ ಎಲ್ಲ ಕೆಲಸಗಾರರ ಮಾಹಿತಿಯನ್ನು ದೃಢೀಕೃತ ಐ.ಡಿ ಕಾರ್ಡ್‌ನೊಂದಿಗೆ ಪೊಲೀಸರಿಗೆ ನೀಡಬೇಕು.

ಸೆಲೆಬ್ರಿಟಿ ಮಾಹಿತಿ: ಕಾರ್ಯಕ್ರಮಗಳಿಗೆ ಸೆಲೆಬ್ರಿಟಿಗಳು, ಡಿಜೆಗಳು ಅಥವಾ ನಟ-ನಟಿಯರನ್ನು ಆಹ್ವಾನಿಸಿದ್ದರೆ, ಅವರ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಒದಗಿಸಬೇಕು.

ಗಲಾಟೆ ಮಾಹಿತಿ: ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ಗಲಾಟೆ ನಡೆದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು.

ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಪಬ್, ಬಾರ್ ಮತ್ತು ಕ್ಲಬ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಆಯೋಜಕರ ಪ್ರಥಮ ಆದ್ಯತೆಯಾಗಬೇಕು.

error: Content is protected !!